ಕಣ್ಣೂರು (ಕೇರಳ): ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ. ನಿನ್ನೆ (ಗುರುವಾರ) ರಾತ್ರಿ 11:45 ಕ್ಕೆ ಪ್ರಯಾಣ ಮುಗಿಸಿದ ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ರಾತ್ರಿ 1.25ಕ್ಕೆ ಬೆಂಕಿ ಕಾಣಿಸಿಕೊಂಡಿತು. ರೈಲಿನ ಕೊನೆಯ ಮೂರು ಬೋಗಿಗಳಿಗೆ ಬೆಂಕಿ ವ್ಯಾಪಿಸಿ, ಸಂಪೂರ್ಣ ಸುಟ್ಟು ಕರಕಲಾಗಿದೆ. ಇತ್ತೀಚೆಗೆ ಇದೇ ರೈಲಿಗೆ ಎಲತ್ತೂರಿನಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣ ಮಾಸುವ ಮುನ್ನವೇ ಮತ್ತೆ ಘಟನೆ ನಡೆದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲಿನ ಇಂಜಿನ್‌ನಿಂದ ಮೂರನೇ ಕೋಚ್‌ವರೆಗೆ ಬೆಂಕಿ ಕಾಣಿಸಿಕೊಂಡಿದ್ದು, ಇತರ ಎರಡು ಬೋಗಿಗಳಿಗೂ ವ್ಯಾಪಿಸಿದೆ. ಘಟನೆಯಲ್ಲಿ ರೈಲಿನ ಎಲ್ಲ ಮೂರು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಂಡ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಪಾಲಕ್ಕಾಡ್‌ನಿಂದ ಬಂದ ದಕ್ಷಿಣ ರೈಲ್ವೆಯ ಎಂಡಿ ಎಂ.ಆರ್.ಜಾಕೀರ್ ಹುಸೇನ್ ನೇತೃತ್ವದ ತಂಡ ಸುಟ್ಟ ಬೋಗಿಗಳನ್ನು ಪರಿಶೀಲಿಸಿದೆ. ತನಿಖೆಯ ನಂತರವೇ ಹೆಚ್ಚಿನ ವಿಷಯಗಳನ್ನು ಹೇಳಲು ಸಾಧ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಘಟನೆಯ ಕುರಿತು ಕೇರಳ ಪೊಲೀಸರು ಮತ್ತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಯೋಜಿತವಾಗಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಮೀಪದಲ್ಲೇ ಸಿಗಬಹುದಾದ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆಯ ವೇಳೆ ರೈಲಿನಲ್ಲಿ ಯಾರಾದ್ರೂ ಇದ್ದರಾ, ಉದ್ದೇಶಪೂರ್ವಕವಾಗಿ ಅಪರಾಧ ಎಸಗಿದ್ದಾರಾ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.
ಫೊರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದೆ. ಎಲತ್ತೂರು ರೈಲು ಸುಟ್ಟ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆಯೇ ಎಂದು ಎನ್‌ಐಎ ತನಿಖೆ ಮಾಡಲಿದೆ. ಶಾರುಖ್ ಸೈಫಿಗೆ ಸಂಬಂಧಿಸಿದವರ ಬಗ್ಗೆಯೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ಕೋಝಿಕ್ಕೋಡ್‌ನ ಎಲತ್ತೂರ್‌ನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಎರಡು ತಿಂಗಳೊಳಗೆ ಇದೇ ರೈಲಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಎಲತ್ತೂರಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳದ ಸಮೀಪವೇ ಬಿಪಿಸಿಎಲ್‌ನ ಪೆಟ್ರೋಲ್ ಡಿಪೋ ಕೂಡ ಕಾರ್ಯನಿರ್ವಹಿಸುತ್ತಿತ್ತು. ಕಣ್ಣೂರಿನಲ್ಲಿಯೂ ಅದೇ ಇರುವುದು ಘಟನೆಯ ನಿಗೂಢತೆ ಹೆಚ್ಚಿಸಿದೆ. ತನಿಖಾ ತಂಡವೂ ಈ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ.
ಎಲತ್ತೂರಿನಲ್ಲಿ ರೈಲಿಗೆ ಬೆಂಕಿ: ಏಪ್ರಿಲ್ 2ರಂದು ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾರುಖ್ ಸೈಫಿ ಪ್ರಯಾಣಿಸುತ್ತಿದ್ದ. ಈ ವೇಳೆ ಕೋಯಿಕ್ಕೋಡ್ ಜಿಲ್ಲೆಯ ಎಲತ್ತೂರು ಸಮೀಪದ ಕೊರಪುಳ ಸೇತುವೆ ಬಳಿ ರೈಲಿನ ಡಿ1 ಕಂಪಾರ್ಟ್ಮೆಂಟ್ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಮಗು, ಮಹಿಳೆ ಸೇರಿ ಮೂವರು ಸಹಪ್ರಯಾಣಿಕರು ಸಾವನ್ನಪ್ಪಿದ್ದರು. ಇತರ 9 ಮಂದಿ ಗಾಯಗೊಂಡಿದ್ದರು. ಬಳಿಕ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಆರೋಪಿ ಶಾರುಖ್ ಸೈಫಿಯನ್ನು ಕೇಂದ್ರ ಗುಪ್ತಚರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಯೂಟ್ಯೂಬರ್ ಪೆಟ್ರೋಲ್ ಖರೀದಿಸಿದ್ದು ಎಲ್ಲಿ ಗೊತ್ತಾ?