ಲಖನೌ(ಉತ್ತರ ಪ್ರದೇಶ): ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ (ಪಿಎಸ್‌ಪಿಎಲ್) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಬುಧವಾರ ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ನನ್ನ ಚಿಕ್ಕಪ್ಪನ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳಲಿದ್ದೇವೆ. ಸಮಾಜವಾದಿ ಪಕ್ಷವು ಅವರಿಗೆ ಸಂಪೂರ್ಣ ಗೌರವವನ್ನು ನೀಡುತ್ತದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಸ್‌ಪಿಯಿಂದ ಬೇರ್ಪಟ್ಟು ಪ್ರಗತಿಶೀಲ ಸಮಾಜವಾದಿ ಪಕ್ಷ -ಲೋಹಿಯಾ (ಪಿಎಸ್‌ಪಿ-ಎಲ್) ಸ್ಥಾಪಿಸಿದ ತಮ್ಮ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರಿಗೆ ಪಕ್ಷದಿಂದ 'ತಕ್ಕ ಗೌರವ' ಸಿಗಲಿದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ನಿರ್ಧಾರವನ್ನು ಸ್ವಾಗತಿಸಿರುವ ಸಮಾಜವಾದಿ ಪಕ್ಷದ ವಕ್ತಾರರು, ಈಗ ರಚಿಸಲಾಗುತ್ತಿರುವ ಮೈತ್ರಿಕೂಟವು ಸಮಾಜವಾದಿ ಸಿದ್ಧಾಂತದ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ ಗೆದ್ದು, ಪ್ರಬಲ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಪಿಎಸ್‌ಪಿ ವಕ್ತಾರ ಅರವಿಂದ್ ಸಿಂಗ್, ಅಖಿಲೇಶ್ ಯಾದವ್ ಅವರು ಮೈತ್ರಿ ಬಗ್ಗೆ ಮಾತನಾಡಿರುವುದು ಸ್ವಾಗತಾರ್ಹ. ಪಿಎಸ್‌ಪಿ-ಎಲ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರು ಸಮಾಜವಾದಿ ಸಿದ್ಧಾಂತ ಹೊಂದಿರುವ ಎಲ್ಲಾ ಪಕ್ಷಗಳು ಒಂದಾಗಬೇಕು ಎಂದು ಹೇಳುತ್ತಲೇ ಇದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತೆಗೆದುಹಾಕಲು ಮತ್ತು ಸಮಾಜವಾದಿ ಸಿದ್ಧಾಂತದ ಸರ್ಕಾರವನ್ನು ರಚಿಸಲು ವೇದಿಕೆಯಾಗಿದೆ ಎಂದಿದ್ದಾರೆ.
ಮತಗಳಿಗಾಗಿ ಅಖಿಲೇಶ್ ಯಾದವ್ ಬೇಕಿದ್ದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಾರೆ ಎಂದು ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೀವ್ರ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ