ಗೊಂಡಾ (ಉತ್ತರ ಪ್ರದೇಶ): ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಯಿಂದ ಗಮನ ಬೇರೆಡೆ ಸೆಳೆಯಲು 'ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ'ವನ್ನು ಆರಂಭಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಸಂಗ್ರಹಿಸುತ್ತಿರುವ ದೇಣಿಗೆಯನ್ನು ಪ್ರಶ್ನಿಸಿದ್ದಾರೆ. ನಿಧಿ ಸಮರ್ಪಣಾ ಅಭಿಯಾನ ಆರಂಭಿಸಿ ರೈತರ ಪ್ರತಿಭಟನೆ ಕಡೆ ಯಾರೂ ಗಮನ ಹರಿಸದಂತೆ ಕೇಂದ್ರ ಸರ್ಕಾರ ತಂತ್ರ ರೂಪಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ನಿನ್ನೆ ದೇಶದಲ್ಲಿ ಅತಿ ಕಡಿಮೆ ಕೋವಿಡ್ ಕೇಸ್ ದಾಖಲು... 3.81 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ಇದೇ ವೇಳೆ, ಕೊರೊನಾ ಲಸಿಕೆ ಬಗ್ಗೆಯೂ ಮಾತನಾಡಿದ ಅಖಿಲೇಶ್ ಯಾದವ್, ವೈದ್ಯರ ಮೇಲೆ ನಮಗೆ ನಂಬಿಕೆ ಇದೆ. ಆದರೆ, ಉತ್ತರ ಪ್ರದೇಶ ಸರ್ಕಾರದ ಮೇಲೆ ಇಲ್ಲ. ಬಿಜೆಪಿ ಎಲ್ಲರಿಗೂ ಲಸಿಕೆ ಹಾಕುವ ಆತುರದಲ್ಲಿದೆ. ಬಿಜೆಪಿಯವರೇ ಮೊದಲು ಡೋಸ್ ಪಡೆಯಲಿ. ಎಲ್ಲ ಬಡಜನರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಲ್ಲರಿಗೂ ಉಚಿತವಾಗಿ ಲಸಿಕೆ ವಿತರಿಸಲಿದ್ದೇವೆ ಎಂದು ಭರವಸೆ ನೀಡಿದರು.