ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಮನೀಶ್ ಜಗನ್ ಅಗರ್ವಾಲ್ ಅವರನ್ನು ಬಂಧಿಸಲಾಗಿದ್ದು, ಇದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಅಗರ್ವಾಲ್ ಬಂಧನವನ್ನು ಖಂಡಿಸಿ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಭಾನುವಾರ ಬೆಳಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿ ಸಿಗ್ನೇಚರ್ ಬಿಲ್ಡಿಂಗ್‌ಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಅಖಿಲೇಶ್ ಯಾದವ್ ಅವರಿಗೆ ಡಿಜಿಪಿ ಕಚೇರಿಯ ಪೊಲೀಸ್ ಅಧಿಕಾರಿಗಳು ಕುಡಿಯಲು ಚಹಾ ನೀಡಿದ್ದರೆ, ಅದನ್ನು ಸೇವಿಸಲು ಅವರು ನಿರಾಕರಿಸಿರುವ ಪ್ರಸಂಗ ಕೂಡ ಜರುಗಿದೆ.
ಇತ್ತೀಚೆಗಷ್ಟೇ ಪತ್ರಕರ್ತರಿಗೆ ಬೆದರಿಕೆ ಹಾಕಿದ್ದ ಆರೋಪ ಮತ್ತು ತಪ್ಪು ಮಾಹಿತಿಗಳನ್ನು ಹಂಚಿಕೊಂಡಿದ್ದ ಕಾರಣಕ್ಕಾಗಿ ಸಮಾಜವಾದಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಮನೀಶ್ ಜಗನ್ ಅಗರ್ವಾಲ್ ಎಫ್‌ಐಆರ್ ದಾಖಲಾಗಿತ್ತು. ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸ್ ಆಧಾರದ ಮೇಲೆ ಶುಕ್ರವಾರ ರಾತ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪೊಲೀಸರ ಈ ಕ್ರಮವನ್ನು ಸಮಾಜವಾದಿ ಪಕ್ಷವು ತೀವ್ರವಾಗಿ ಖಂಡಿಸಿದೆ. ಕೋಡಲೇ ಮನೀಶ್ ಅಗರ್ವಾಲ್ ಅವರನ್ನು ಬಿಡುಗಡೆ ಮಾಡುವಂತೆ ಎಸ್ಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಈ ಬಂಧನವು ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ.
ಡಿಜಿಪಿ ಕಚೇರಿಯಲ್ಲಿ ಅಖಿಲೇಶ್ ಧರಣಿ: ಅಲ್ಲದೇ, ಸಮಾಜವಾದಿ ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ಡಿಜಿಪಿ ಪ್ರಧಾನ ಕಚೇರಿ ಬಳಿಯೂ ಇಂದು ಪ್ರತಿಭಟನೆ ಕೈಗೊಂಡಿದ್ದು, ಮನೀಶ್ ಅಗರ್ವಾಲ್ ಬಂಧನ ಖಂಡಿಸಿ ಘೋಷಣೆಗಳನ್ನು ಕೂಗಿದರು. ಮತ್ತೊಂದೆಡೆ ಪಕ್ಷದ ಅಧ್ಯಕ್ಷರಾದ ಅಖಿಲೇಶ್ ಯಾದವ್ ಕೂಡ ಮನೀಶ್ ಅಗರ್ವಾಲ್ ಅವರ ಬಂಧನವನ್ನು ವಿರೋಧಿಸಿ ಡಿಜಿಪಿ ಕಚೇರಿಗೆ ಆಗಮಿಸಿ, ಕಚೇರಿಯಲ್ಲೇ ಧರಣಿ ಕುಳಿತಿದ್ದಾರೆ. ಅಖಿಲೇಶ್ ಯಾದವ್ ಅವರಿಗೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಸೇರಿದಂತೆ ಹಲವು ಹಿರಿಯ ನಾಯಕರು ಸಾಥ್ ನೀಡಿದ್ದಾರೆ.
ಚಹಾ ಕುಡಿಯಲು ಅಖಿಲೇಶ್ ಹಿಂದೇಟು: ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್ ಯಾದವ್ ಡಿಜಿಪಿ ಕಚೇರಿಗೆ ಬಂದಿರುವ ಅಲ್ಲಿನ ಪೊಲೀಸ್ ಅಧಿಕಾರಿಗಳು ಕುಡಿಯಲು ಚಹಾ ನೀಡಿದ್ದರು. ಆದರೆ, ಈ ಚಹಾ ಸೇವಿಸಲು ಅಖಿಲೇಶ್ ಯಾದವ್ ನಿರಾಕರಿಸಿರುವ ಪ್ರಸಂಗ ನಡೆದಿದೆ. 'ನಾನು ಇಲ್ಲಿ ಚಹಾ ಕುಡಿಯುವುದಿಲ್ಲ. ನನಗೆ ಕೊಟ್ಟ ಚಹಾದಲ್ಲಿ ವಿಷವನ್ನು ಬೆರೆಸಿರಬಹುದು. ಹೀಗಾಗಿ ಈ ಚಹಾ ಮೇಲೆ ನನಗೆ ನಂಬಿಕೆ ಇಲ್ಲ' ಎಂಬುವುದಾಗಿ ಅಖಿಲೇಶ್ ಯಾದವ್ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ನಮ್ಮ ಪಕ್ಷದವರು ಪೊಲೀಸರ ಟಾರ್ಗೆಟ್: ಇದೇ ವೇಳೆ ಮಾತನಾಡಿರುವ ಪಕ್ಷದ ವಕ್ತಾರ ಮನೀಶ್ ಸಿಂಗ್, ಸಮಾಜವಾದಿ ಪಕ್ಷದ ಸಕ್ರಿಯ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಟಾರ್ಗೆಟ್ ಮಾಡುತ್ತಿರುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಮನೀಶ್ ಜಗನ್ ಅಗರ್ವಾಲ್ ಅವರನ್ನು ಏಕೆ ಬಂಧಿಸಲಾಗಿದೆ ಎಂಬುವುದು ಇದುವರೆಗೂ ಪೊಲೀಸರು ಮಾಹಿತಿಯನ್ನು ನೀಡಿಲ್ಲ. ನಮ್ಮ ಪಕ್ಷದವರ ಮೇಲೆ ಪೊಲೀಸ್ ಇಲಾಖೆ ನಡೆಸುತ್ತಿರುವ ಅನ್ಯಾಯದ ಬಗ್ಗೆ ಕೇಳಲು ನಮ್ಮ ನಾಯಕ ಅಖಿಲೇಶ್ ಯಾದವ್ ಡಿಜಿಪಿ ಅವರನ್ನು ಭೇಟಿ ಮಾಡಲು ಬಂದಿದ್ದಾರೆ. ನಮ್ಮ ಇಡೀ ಪಕ್ಷವು ಕಾರ್ಯಕರ್ತರ ಬೆನ್ನಿಗೆ ನಿಂತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಯಲಲಿತಾ ಸಾವು.. ಪ್ರಧಾನಿ ಮೋದಿ ವಿರುದ್ಧ ಬೊಟ್ಟು ತೋರಿಸಿದ ಡಿಎಂಕೆ ಶಾಸಕ