ನವದೆಹಲಿ : ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ದೆಹಲಿ ಕೋರ್ಟ್ ಮಾಜಿ ಸಚಿವ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ಸಮನ್ಸ್ ಜಾರಿ ಮಾಡಿದೆ.
ದೋಷಾರೋಪ ಪಟ್ಟಿ ಪರಿಶೀಲನೆ ಮಾಡಿರುವ ವಿಶೇಷ ನ್ಯಾಯಾಧೀಶರಾದ ಎಂ.ಕೆ ನಾಗ್ಪಾಲ್, ಡಿಸೆಂಬರ್ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಕೆ ಮಾಡಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಹಾಗೂ ಅವರ ಮಗ ಕಾರ್ತಿ ವಿರುದ್ಧ ಸಮರ್ಪಕ ಸಾಕ್ಷಿ ಲಭ್ಯವಾಗಿರುವ ಕಾರಣ ಇದೀಗ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಯುನೈಟೆಡ್ ಕಿಂಗ್ಡಮ್ ಹಾಗೂ ಸಿಂಗಪೂರ್ನಿಂದಲೂ ಅಗತ್ಯ ಮಾಹಿತಿ ಪೂರೈಕೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. 2006ರಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದ ವೇಳೆ ನಡೆದಿರುವ ಪ್ರಕರಣ ಇದಾಗಿದೆ.
ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದಕ್ಕಾಗಿ ವಿದೇಶಿ ಹೂಡಿಕೆಗೆ 3,500 ಕೋಟಿ ಮೊತ್ತದ ಹಗರಣವಾಗಿದೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಚಿದಂಬರಂ ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.
ಜೊತೆಗೆ ಪುತ್ರ ಕಾರ್ತಿ ಮಾಲೀಕತ್ವದ ಕಂಪನಿಯಲ್ಲಿ ಶೇ.5ರಷ್ಟು ಪಾಲು ಪಡೆಯಲು ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಒಪ್ಪಂದದ ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?: ಏರ್ಸೆಲ್ ಕಂಪನಿ 2006ರಲ್ಲಿ 3,500 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ವೇಳೆ ಟೆಲಿಕಾಂ ಕಂಪನಿ 180 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು. ಈ ವೇಳೆ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದರಿಂದ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ.