ವಡೋದರ(ಗುಜರಾತ್): ಭಾರತದ ಬಹುರಾಷ್ಟ್ರೀಯ ಕಂಪನಿಯಾದ ಟಾಟಾ, ಏರ್‌ಬಸ್‌ನ ಸಹಭಾಗಿತ್ವದಲ್ಲಿ ಗುಜರಾತಿನ ವಡೋದರಾದಲ್ಲಿ ಭಾರತೀಯ ವಾಯುಪಡೆಗಾಗಿ C-295 ಸಾರಿಗೆ ವಿಮಾನಗಳನ್ನು ತಯಾರಿಸಲಿದೆ. ಈ ಉತ್ಪಾದಕ ಕೇಂದ್ರಕ್ಕೆ ಅ.30ರಂದು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಅಡಿಗಲ್ಲು ಹಾಕುವ ಕಾರ್ಯಕ್ರಮ ನೆರವೇರಲಿದೆ ಎಂದು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.
ಯುರೋಪಿನ ಏವಿಯೇಷನ್ ಕ್ಷೇತ್ರದ ಪ್ರಮುಖ ಕಂಪನಿ ಏರ್‌ಬಸ್ ತನ್ನ C295 ವಿಮಾನ ತಯಾರಿಸಲು ಭಾರತೀಯ ನಿಯಂತ್ರಕದಿಂದ ನಿಯಂತ್ರಕ ಅನುಮೋದನೆಯನ್ನು ಪಡೆದಿದೆ ಎಂದು ಈ ಹಿಂದೆ ಹೇಳಿತ್ತು. ಅಂಥ ಅನುಮೋದನೆಯನ್ನು ಪಡೆದ ಮೊದಲ ವಿದೇಶಿ ಮೂಲದ ಉಪಕರಣ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಏರ್‌ಬಸ್ ಈಗ ಪಾತ್ರವಾಗಿದೆ.
40 ವಿಮಾನಗಳನ್ನು ತಯಾರಿಸುವುದರ ಹೊರತಾಗಿ, ಗುಜರಾತ್‌ನ ವಡೋದರದಲ್ಲಿರುವ ಈ ಸೌಲಭ್ಯವು ವಾಯುಪಡೆಯ ಅಗತ್ಯತೆಗಳು ಮತ್ತು ರಫ್ತುಗಳಿಗಾಗಿ ಹೆಚ್ಚುವರಿ ವಿಮಾನಗಳನ್ನು ತಯಾರಿಸಲಿದೆ ಎಂದು ರಕ್ಷಣಾ ಕಾರ್ಯದರ್ಶಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತವು ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಕಂಪನಿಯೊಂದಿಗೆ 21 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಹಳೆಯದಾದ Avro-748 ವಿಮಾನಗಳನ್ನು 56 C295 ಸಾರಿಗೆ ವಿಮಾನಗಳೊಂದಿಗೆ ಬದಲಿಸುವ ಒಪ್ಪಂದ ಇದಾಗಿದೆ. ಖಾಸಗಿ ಕಂಪನಿಯೊಂದು ಭಾರತದಲ್ಲಿ ವಿಮಾನ ತಯಾರಿಸುವ ಪ್ರಥಮ ಒಪ್ಪಂದ ಇದಾಗಿದೆ.
ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್ (DGAQA) ನಿಯಂತ್ರಕ ಅನುಮೋದನೆಯನ್ನು ನೀಡಿದೆ.
ಇದನ್ನೂ ಓದಿ: ಏರ್ ಬಸ್ A380 ಲ್ಯಾಂಡ್: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೆಂಪೇಗೌಡ ವಿಮಾನ ನಿಲ್ದಾಣ