ನವದೆಹಲಿ: ಮದ್ಯದ ಅಮಲಿನಲ್ಲಿ ಪ್ರಯಾಣಿಕರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಗಳು ಈಚೆಗೆ ಸದ್ದು ಮಾಡಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ವಿಮಾನಸಂಸ್ಥೆ ಮದ್ಯ ಪೂರೈಕೆ ನೀತಿಗೆ ತಿದ್ದುಪಡಿ ತಂದಿದೆ. "ಅಗತ್ಯಕ್ಕಿಂತಲೂ ಹೆಚ್ಚಿನ ಮದ್ಯವನ್ನು ಪ್ರಯಾಣಿಕರಿಗೆ ನೀಡುವಂತಿಲ್ಲ. ಅದನ್ನು ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಡುವ ಜಾಣ್ಮೆಯನ್ನು ವಿಮಾನ ಸಿಬ್ಬಂದಿ ಹೊಂದಿರಬೇಕು" ಎಂದು ತಿಳಿಸಿದೆ.
ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ 2 ಪ್ರಕರಣಗಳು ತೀವ್ರ ಮುಜುಗರಕ್ಕೀಡು ಮಾಡಿತ್ತು. ಹೀಗಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಛೀಮಾರಿ ಹಾಕಿದ್ದಲ್ಲದೇ ದಂಡವನ್ನೂ ವಿಧಿಸಿತ್ತು. ಇದರ ಪರಿಣಾಮ ವಿಮಾನ ಸೇವಾ ಸಂಸ್ಥೆ, ಮದ್ಯ ಸರಬರಾಜು ನೀತಿಯನ್ನೇ ಬದಲಿಸಿದೆ. ಈ ಬಗ್ಗೆ ಜನವರಿ 19ರಂದೇ ಪರಿಷ್ಕೃತ ನೀತಿಯನ್ನು ಜಾರಿಗೆ ತಂದಿದೆ.
ಕ್ಯಾಬಿನ್ ಸಿಬ್ಬಂದಿ ಜಾಣ್ಮೆಗೆ ಸವಾಲು: ಜನವರಿ 19ರಂದು ಹೊರಡಿಸಲಾದ ಪರಿಷ್ಕೃತ ನೀತಿಯ ಪ್ರಕಾರ, ಕ್ಯಾಬಿನ್ ಸಿಬ್ಬಂದಿ ನೀಡದ ಹೊರತು ಪ್ರಯಾಣಿಕರು ಮದ್ಯಪಾನ ಮಾಡುವಂತಿಲ್ಲ. ವಿಮಾನದಲ್ಲಿ ಅವರೇ ತಂದ ಮದ್ಯವನ್ನೂ ಸೇವಿಸುವಂತಿಲ್ಲ. ಹಾಗೊಂದು ವೇಳೆ ಮದ್ಯ ಸೇವನೆ ಮಾಡುತ್ತಿದ್ದಲ್ಲಿ ಅದನ್ನು ಕ್ಯಾಬಿನ್ ಸಿಬ್ಬಂದಿ ಗುರುತಿಸಿ, ಆರೋಗ್ಯಕರ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಲು ಅನುಮತಿಸಬೇಕು. ವಿಮಾನದಲ್ಲಿ ನೀಡಿದ ಮದ್ಯ ಸಮಂಜಸ ಮತ್ತು ಸುರಕ್ಷಿತ ಪ್ರಮಾಣದಲ್ಲಿರಬೇಕು. ಹೆಚ್ಚುವರಿಯಾಗಿ ಪ್ರಯಾಣಿಕರು ಕೇಳಿದಲ್ಲಿ ನಯವಾಗಿ ನಿರಾಕರಿಸಿ, ಮನವರಿಕೆ ಮಾಡಿಕೊಡಬೇಕು ಎಂಬುದು ಹೊಸ ರೂಲ್ಸ್ನಲ್ಲಿದೆ.
ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಹೊಸ ನಿಯಮ ರೂಪಿಸಿರುವ ಸಂಸ್ಥೆ, ಪ್ರಯಾಣಿಕರೊಂದಿಗೆ ಸಭ್ಯವಾಗಿ ವರ್ತಿಸಬೇಕು. ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಮದ್ಯವನ್ನು ನೀಡುವುದಿಲ್ಲ ಎಂದು ವಿನಯದಿಂದ ತಿಳಿಸುವ ಚಾತುರ್ಯವನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದೆ. ಪ್ರಯಾಣಿಕರಿಗೆ ವಿಮಾನದಲ್ಲಿ ಮದ್ಯ ನೀಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಸಂತೋಷಕ್ಕಾಗಿ ಸೇವನೆ, ಅತಿಯಾದ ಮದ್ಯಪಾನ ಮಾಡುವುದರ ನಡುವೆ ವ್ಯತ್ಯಾಸವಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಕ್ಯಾಬಿನ್ ಸಿಬ್ಬಂದಿಗೆ ಪರಮಾಧಿಕಾರ: ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೆಚ್ಚಿನ ಅಧಿಕಾರ ನೀಡಿರುವ ಏರ್ ಇಂಡಿಯಾ ಸಂಸ್ಥೆ, ಅಶಿಸ್ತಿನಿಂದ ನಡೆದುಕೊಳ್ಳುವ ಮತ್ತು ಅತಿಯಾದ ಮದ್ಯ ಸೇವನೆ ಮಾಡುವ ಪ್ರಯಾಣಿಕರ ಮೇಲೆ ನಿಯಂತ್ರಣಕ್ಕೆ ಸೂಚಿಸಿದೆ. ಅಂತಹ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಣೆ, ಮದ್ಯ ಪೂರೈಕೆ ಸ್ಥಗಿತ, ಅತಿಯಾದ ಮದ್ಯಪಾನ ಮಾಡುತ್ತಿದ್ದರೆ ಅವರನ್ನು ವಿಮಾನದಿಂದಲೇ ಕೆಳಗಿಳಿಸುವ ಅಧಿಕಾರವನ್ನೂ ನೀಡಿದೆ. ಪರಿಷ್ಕೃತ ನೀತಿಯಲ್ಲಿ ವಿಮಾನ ಪ್ರಯಾಣಿಕರಿಗೂ ಕೆಲ ನಿಬಂಧನೆಗಳನ್ನು ಹಾಕಿದ್ದು, ಪಾಲಿಸಲು ಕೋರಿದೆ.
ಏರ್ ಇಂಡಿಯಾಗೆ ಮತ್ತೆ ₹10 ಲಕ್ಷ ದಂಡ: ಇನ್ನು ಪ್ರಯಾಣಿಕನೋರ್ವ ತನ್ನ ಮಹಿಳಾ ಸಹ ಪ್ರಯಾಣಿಕರ ಮೈಮೇಲೆ ಮೂತ್ರ ವಿಸರ್ಜಿಸಿದ ಘಟನೆಯನ್ನು ತನಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಡಿಜಿಸಿಎ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡದ ಬರೆ ಹಾಕಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಪ್ರಕರಣವಾಗಿದೆ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಇಂಥ ಪ್ರಕರಣಗಳಲ್ಲಿ ವಿಳಂಬ ಧೋರಣೆ ಹಾಗು ಸೂಕ್ತ ಕ್ರಮಕ್ಕೆ ಹಿಂದೇಟು ಹಾಕಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ವಿಮಾನಯಾನ ಸೇವಾ ಸಂಸ್ಥೆಗಳ ನಿಯಂತ್ರಕ ಡಿಜಿಸಿಎ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ಜಡಿದಿತ್ತು. ಅಷ್ಟೇ ಅಲ್ಲ, ಪೈಲಟ್ ಪರವಾನಗಿಯನ್ನೂ ರದ್ದುಪಡಿಸಿತ್ತು.
ಇದನ್ನೂ ಓದಿ: ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ದಂಡ, ಪೈಲಟ್ ಲೈಸನ್ಸ್ ಅಮಾನತು