ಹೈದರಾಬಾದ್: 'ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಇನ್ನೊಂದೆಡೆ, ನಮ್ಮ ದೇಶದ ಹಲವೆಡೆ ಚೀನಾ ಬಂದು ಕುಳಿತಿದೆ. ಆದ್ರೆ ಪ್ರಧಾನಮಂತ್ರಿ ಈ ಎರಡು ಪ್ರಮುಖ ವಿಷಯಗಳ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ. ಚೀನಾ ಬಗ್ಗೆ ಮಾತನಾಡಲು ಅವರು ಹೆದರುತ್ತಿದ್ದಾರೆ' ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಾಪ್ರಹಾರ ನಡೆಸಿದರು.
ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಜಮ್ಮು ಕಾಶ್ಮೀರದಲ್ಲಿ ನಮ್ಮ 9 ಮಂದಿ ಮಂದಿ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಆದ್ರೆ ಅಕ್ಟೋಬರ್ 24 ರಂದು ಭಾರತ-ಪಾಕಿಸ್ತಾನ ಟಿ-20 ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ' ಎಂದು ವ್ಯಂಗ್ಯವಾಡಿದರು.
'ಪುಲ್ವಾಮಾದಲ್ಲಿ ಪಾಕಿಸ್ತಾನ ದುಷ್ಕೃತ್ಯ ಎಸಗಿದಾಗ ಮೋದಿ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದಿದ್ದರು. ನಾವು ವೈರಿಗಳ ಮನೆಗೆ ನುಗ್ಗಿ ಹೊಡೆಯಿರಿ ಎಂದು ಹೇಳಿದ್ದೆವು. ಆದ್ರೆ, ಚೀನಾ ನಮ್ಮ ದೇಶದಲ್ಲೀಗ ಅವಿತು ಕುಳಿತಿದೆ. ಮೋದಿ ಏನೂ ಮಾಡುತ್ತಿಲ್ಲ. ಅರುಣಾಚಲ ಪ್ರದೇಶ, ಉತ್ತರಾಖಂಡ, ಲಡಾಕ್‌ನಲ್ಲೆಲ್ಲಾ ಚೀನಾ ಆಗಲೇ ಬಂದು ಕುಳಿತಿದೆ' ಎಂದು ಕಳವಳ ವ್ಯಕ್ತಪಡಿಸಿದರು.
'ಈ ಹಿಂದೆ, ಅಲ್ಲಿ ಯೋಧರು ಸಾವಿಗೀಡಾಗುತ್ತಿದ್ದರೆ ಇಲ್ಲಿ ಮನಮೋಹನ್ ಸಿಂಗ್ ಸರ್ಕಾರ ಬಿರಿಯಾನಿ ತಿನ್ನಿಸುತ್ತಿದೆ ಎಂದು ಮೋದಿ ಟೀಕಿಸಿದ್ದರು. ಆದರೆ ಈಗ ಕಾಶ್ಮೀರದಲ್ಲಿ 9 ಸೈನಿಕರ ಸಾವು ಸಂಭವಿಸಿದೆ. ನೀವೀಗ ಟಿ-20 ಆಟವಾಡುತ್ತಿದ್ದೀರಾ?' ಎಂದು ವ್ಯಂಗ್ಯವಾಡಿದರು.
'ಪಾಕಿಸ್ತಾನವು ದೇಶದ ನಾಗರಿಕ ಬದುಕಿನ ಮೇಲೆ ಟಿ20 ಆಟವಾಡುತ್ತಿದೆ. ಜಮ್ಮು ಕಾಶ್ಮೀರಲ್ಲಿ ಬಿಹಾರದ ಬಡಪಾಯಿಗಳ ಕೊಲೆ ಆಗುತ್ತಿದೆ. ಹಾಗಾದರೆ ಗುಪ್ತಚರ ಇಲಾಖೆ, ಅಮಿತ್ ಶಾ ಏನು ಮಾಡುತ್ತಿದ್ದಾರೆ? ದ್ರೋಣ್‌ಗಳ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ರವಾನೆಯಾಗುತ್ತಿದೆ. ಟಾರ್ಗೆಟೆಡ್ ಕಿಲ್ಲಿಂಗ್ಸ್ ನಡೆಯುತ್ತಿದೆ. ಸಾಂವಿಧಾನಿಕ ಸ್ಥಾನಮಾನ ತೆಗೆದುಹಾಕಿದಾಗ ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದರು. ಆದ್ರೆ ಆಗಿದ್ದೇನು? ಹಿಂಸಾತ್ಮಕ ಕೃತ್ಯಗಳು ಕಡಿಮೆಯಾದವೇ ಎಂದು ಅವರು ಪ್ರಶ್ನಿಸಿದರು. ಹಾಗಾಗಿ, ಮೋದಿ ಸರ್ಕಾರದ ಬಳಿ ಭಯೋತ್ಪಾದಕರನ್ನು ಮಟ್ಟ ಹಾಕಲು ಯಾವುದೇ ನಿಯಮಗಳಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 17ರ ಹರೆಯಕ್ಕೆ ಪ್ರೀತಿ-ಪ್ರೇಮ: ಗೆಳೆಯನ ಸಹಾಯದಿಂದ ತಾಯಿಯನ್ನೇ ಕೊಂದ ಬಾಲಕಿ