ನವದೆಹಲಿ: ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗವು ಶನಿವಾರ ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ 'ದೃಷ್ಟಿ 2021' ರಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಬಳಿಕ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ರೋಹನ್ ಗುಪ್ತಾ, ಸಹಿ ಮಾಡಿದ ನಿರ್ಣಯವನ್ನು ಓದಿದರು. ದೇಶದಲ್ಲಿ ಸತ್ಯ ಮತ್ತು ಧೈರ್ಯ ಮತ್ತು ವಿಶ್ವಾಸವನ್ನು ತೋರಿದ ಏಕೈಕ ನಾಯಕ ರಾಹುಲ್ ಗಾಂಧಿ. ನ್ಯಾಯ-ನೀತಿ ಮಾರ್ಗಗಳಿಂದ ಅವರು ದೇಶವನ್ನು ರಕ್ಷಿಸುತ್ತಾರೆ ಎಂದು ನಾವು ನಂಬಿದ್ದೇವೆ ಎಂದರು.
ರಾಹುಲ್ ಗಾಂಧಿಯವರ ನಾಯಕತ್ವವು ದೇಶಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತರುತ್ತದೆ ಎಂಬುದನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಘಟಕ ಗಮನಿಸಿದೆ. ಆದ್ದರಿಂದ, ನಾವು ರಾಹುಲ್ ಗಾಂಧಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸುತ್ತೇವೆ ಎಂದು ಹೇಳಿದರು.
ಈ ಹಿಂದೆಯೂ ದೆಹಲಿ ಕಾಂಗ್ರೆಸ್ ಮಹಿಳಾ ಘಟಕ, ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ನಿರ್ಣಯವನ್ನು ಅಂಗೀಕರಿಸಿತ್ತು. ದೆಹಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಮೃತ ಧವನ್ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಈ ವೇಳೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ದೇಜುಜಾ ಅವರು ಉಪಸ್ಥಿತರಿದ್ದು, ಅಮೃತ ಧವನ್ ನಿರ್ಣಯವನ್ನು ಓದಿದ್ದರು.
ಇದನ್ನೂ ಓದಿ: ಬಿಜೆಪಿ-ಆರ್‌ಎಸ್‌ಎಸ್ ನಕಲಿ ಹಿಂದೂಗಳು, ರಾಜಕೀಯ ಲಾಭಕ್ಕಾಗಿ ಧರ್ಮ ಬಳಕೆ ಮಾಡ್ತಾರೆ: ರಾಹುಲ್ ಗಾಂಧಿ
ದೆಹಲಿ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರು ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಬೆಂಬಲ ಸೂಚಿಸಿದ್ದಾರೆ.