ಪಾಣಿಪತ್: ಮುಂದಿನ ವರ್ಷ ಅಯೋಧ್ಯೆ ಶ್ರೀರಾಮಮಂದಿರವನ್ನು ಉದ್ಘಾಟಿಸಲಾಗುವುದು ಎಂದು ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 'ದೇಗುಲ ಉದ್ಘಾಟನೆ ಬಗ್ಗೆ ಘೋಷಿಸಲು ನೀವೇನು ಅಲ್ಲಿಯ ಪೂಜಾರಿಯೇ ಅಥವಾ ಮಹಾಂತರೇ' ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ ಅವರು, ಶೀಘ್ರದಲ್ಲೇ ನಡೆಯುವ ತ್ರಿಪುರಾ ಚುನಾವಣೆಗೂ ಮೊದಲು ಈ ಘೋಷಣೆ ಮಾಡಿದ್ದೀರಿ. ಮುಂದಿನ ವರ್ಷ ಲೋಕಸಭೆ ಚುನಾವಣೆ ಕೂಡ ಜರುಗಲಿದೆ. ಅದರ ಭಾಗವಾಗಿ ನೀವು ಈಗಲೇ ದೇಗುಲದ ಉದ್ಘಾಟನೆ ಬಗ್ಗೆ ಘೋಷಿಸಿರುವುದು ಎಷ್ಟು ಸರಿ. ಅಲ್ಲದೇ ಇದನ್ನು ಘೋಷಿಸಲು ನೀವ್ಯಾರು ಎಂದು ಕೇಳಿದ್ದಾರೆ.
ಪ್ರತಿಯೊಬ್ಬರಿಗೂ ದೇವರಲ್ಲಿ ನಂಬಿಕೆ ಇದೆ. ದೇಗುಲದ ಮಹಾಂತರು ಮತ್ತು ದಾರ್ಶನಿಕರು ಅದನ್ನು ಹೇಳಲಿ. ನೀವು ರಾಜಕಾರಣಿ. ನಿಮ್ಮ ಕೆಲಸ ದೇಶ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಜನರಿಗೆ ಉತ್ತಮ ಆಹಾರ ಭದ್ರತೆ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದು ನಿಮ್ಮ ಕೆಲಸ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷವು ಅಯೋಧ್ಯಾ ರಾಮಮಂದಿರವನ್ನು ಈ ಹಿಂದೆಯೂ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿತ್ತು. ಕೋಟ್ಯಂತರ ಜನರ ನಂಬಿಕೆಯಾದ ದೇಗುಲವನ್ನು ಅವರು ಕ್ಷುಲ್ಲಕ ರಾಜಕೀಯಕ್ಕೆ ಪ್ರತಿ ಬಾರಿ ಎಳೆದು ತರುತ್ತಿದ್ದಾರೆ. ಇದು ಆ ಪಕ್ಷದ ತಂತ್ರವನ್ನು ತಿಳಿಸುತ್ತದೆ. ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಪಕ್ಷದ ಪ್ರಚಾರಕ್ಕೆ ದೇವಾಲಯ ಮತ್ತೆ ಮತ್ತೆ ಮೂಲೆಗುಂಪಾಗಬಹುದು ಎಂಬ ಅನುಮಾನವನ್ನು ಖರ್ಗೆ ಅವರು ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ಮತ್ತು ನಿರುದ್ಯೋಗ ಸೇರಿದಂತೆ ದೇಶದಲ್ಲಿ ತಾಂಡವವಾಡುತ್ತಿರುವ ಹಲವಾರು ಗಂಭೀರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ದಿಟ್ಟ ಕ್ರಮಕೈಗೊಂಡಿಲ್ಲ. ಬಿಜೆಪಿ ಚುನಾವಣೆ ಸಮಯದಲ್ಲಿ ದೊಡ್ಡ ಭರವಸೆಗಳನ್ನು ನೀಡುತ್ತದೆ. ಅಧಿಕಾರಕ್ಕೆ ಬಂದ ನಂತರ ಆ ಮಾತುಗಳನ್ನು ಈಡೇರಿಸುವುದಿಲ್ಲ ಎಂದು ಆರೋಪಿಸಿದರು.
ತ್ರಿಪುರಾದಲ್ಲಿ ಬಿಜೆಪಿ ನಡೆಸುತ್ತಿರುವ ಜನವಿಶ್ವಾಸ ಯಾತ್ರೆಯ ವೇಳೆ ಗೃಹ ಸಚಿವ ಅಮಿತ್ ಶಾ ಅವರು, ಈ ವರ್ಷಾಂತ್ಯದ ವೇಳೆಗೆ ಅಯೋಧ್ಯೆ ರಾಮಮಂದಿರ ಸಿದ್ಧವಾಗಲಿದೆ. ಜನವರಿ 1, 2024ಕ್ಕೆ ಭವ್ಯ ಮಂದಿರ ಉದ್ಘಾಟನೆಯಾಗಲಿದೆ ಘೋಷಿಸಿದ್ದರು.
ಓದಿ: ಕೇಂದ್ರದಿಂದ ಮತ್ತೊಂದು ದಿಟ್ಟ ನಿರ್ಧಾರ.. ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಸಂಘಟನೆ ನಿಷೇಧ