ಕೊಯಮತ್ತೂರು (ತಮಿಳುನಾಡು): 2019ರಲ್ಲಿ ಪೊಲ್ಲಾಚಿ ಎಂಬಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ನಾಯಕ ಸೇರಿದಂತೆ ಮೂವರನ್ನು ಸಿಬಿಐ ತಂಡ ಬುಧವಾರ ಬಂಧಿಸಿದೆ.
ಬಂಧಿತರನ್ನು ಮಹಿಳಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಖ್ಯಾತ ಕ್ರೀಡಾಪಟು ಅಪಹರಣ ಕೇಸ್: ಮಾಜಿ ಸಚಿವೆಯ ವಿಚಾರಣೆ, ಪತಿ ಪರಾರಿ
ಬಂಧಿತ ಐವರ ವಿರುದ್ಧ 2019ರ ಮೇ ತಿಂಗಳಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯಿಂದ ಆಡಳಿತಾರೂಢ ಎಐಎಡಿಎಂಕೆಯ ವಿದ್ಯಾರ್ಥಿ ವಿಭಾಗದ ನಾಯಕ ಅರುಣಾನಂದಮ್ ಮತ್ತು ಅವರ ಇಬ್ಬರು ಸ್ನೇಹಿತರನ್ನು ಬುಧವಾರ ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಫೆಬ್ರವರಿ 2019ರಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆ ದೂರಿನ ಪ್ರಕಾರ ನಾಲ್ವರು ಪುರುಷರು ಪೊಲ್ಲಾಚಿಯಲ್ಲಿ ಆಕೆಯನ್ನು ಕಾರ್ನಲ್ಲಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರಂತೆ. ಇದರ ಜೊತೆಗೆ ಕೃತ್ಯದ ವಿಡಿಯೋ ಚಿತ್ರೀಕರಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದರಂತೆ.
ಪೊಲೀಸರು ವಿಚಾರಣೆ ಕೈಗೊಂಡಾಗ ಇದೇ ರೀತಿಯಲ್ಲಿ ಹಲವಾರು ಮಹಿಳೆಯರಿಗೆ ಈ ಗುಂಪು ಲೈಂಗಿಕ ಕಿರುಕುಳ ನೀಡಿತ್ತು ಎಂದು ತಿಳಿದು ಬಂದಿದೆ. ಇದರ ವಿರುದ್ಧ ತೀವ್ರ ಜನಾಕ್ರೋಶವೂ ವ್ಯಕ್ತವಾಗಿತ್ತು.