ಅಹಮದಾಬಾದ್(ಗುಜರಾತ್): ಇಲ್ಲಿನ ಮೊರ್ಬಿ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೇತುವೆಯ ಮೇಲೆ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟು ಜನರು ಇದ್ದಿದ್ದು, ಅದು ಕುಸಿದು ಬೀಳಲು ಕಾರಣ ಎಂದು ಹೇಳಲಾಗುತ್ತಿದೆ. ಸೇತುವೆ ಕುಸಿಯುವುದಕ್ಕಿಂತಲೂ ಮೊದಲು ಅಹಮದಾಬಾದ್ನ ಕುಟುಂಬವೊಂದು ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ಎಚ್ಚರಿಕೆ ನೀಡಿತ್ತು.
ಸೇತುವೆ ಮೇಲೆ ಯುವಕರ ಕೀಟಲೆ: ಸೇತುವೆ ಕುಸಿದು ಬೀಳುವುದಕ್ಕೂ ಮೊದಲು ಅಹಮದಾಬಾದ್ನ ಕುಟುಂಬವೊಂದು ಇಲ್ಲಿಗೆ ಭೇಟಿ ನೀಡಿತ್ತು. ಸೇತುವೆಯ ಸ್ಥಿತಿಯ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸೇತುವೆಯ ಮೇಲೆ ನೂರಾರು ಜನರು ಏಕಕಾಲಕ್ಕೆ ನಿಂತಿದ್ದರು. ಕೆಲ ಯುವಕರು ಸೇತುವೆಯನ್ನು ಅಲುಗಾಡಿಸಲು ಆರಂಭಿಸಿದರು. ಇದರಿಂದ ಅಲ್ಲಿದ್ದ ಜನರು ಭಯಗೊಂಡು ಈ ರೀತಿ ಮಾಡದಂತೆ ಯುವಕರಿಗೆ ಹೇಳಿದರು. ಆದರೆ, ಇದನ್ನು ನಿರ್ಲಕ್ಷ್ಯಸಿದ ಯುವಕರು ಸೇತುವೆ ಅಲುಗಾಡಿಸುವುದನ್ನು ಮುಂದುವರಿಸಿದರು.
ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಯುವಕರ ಚೇಷ್ಟೆಯ ಬಗ್ಗೆ ದೂರು ನೀಡಿ, ಅವರನ್ನು ತಡೆಯಲು ಸೂಚಿಸಲಾಯಿತು. ಭದ್ರತಾ ಸಿಬ್ಬಂದಿ ಕೂಡ ಯುವಕರಿಗೆ ಮೌಖಿಕ ಸೂಚನೆ ನೀಡಿದರು.
ನಿಲ್ಲದ ಯುವಕರ ಕುಚೇಷ್ಟೆ: ಎಚ್ಚರಿಕೆಗೂ ಬಗ್ಗದ ಯುವಕರು ಸೇತುವೆಯನ್ನು ಇನ್ನಷ್ಟು ಜೋರಾಗಿ ಅಲುಗಾಡಿಸುವುದನ್ನು ಮುಂದುವರಿಸಿದರು. ಇದರಿಂದಾಗಿ ಹಿರಿಯರು ಮತ್ತು ಮಕ್ಕಳು ಅದರ ಮೇಲೆ ನಡೆಯಲು ಕಷ್ಟಪಡುತ್ತಿದ್ದರು. ಆಸರೆಗಾಗಿ ಸೇತುವೆ ಕಂಬಿಗಳನ್ನು ಹಿಡಿದುಕೊಂಡಿದ್ದರು. ಯುವಕರ ಕುಚೇಷ್ಟೆ ತಡೆಯಬೇಕಿದ್ದ ಭದ್ರತಾ ಸಿಬ್ಬಂದಿ ಕೂಡ ಇದನ್ನು ನಿರ್ಲಕ್ಷಿಸಿದರು.
ಬಳಿಕ ನಾವು ಅಲ್ಲಿಂದ ಸಂಜೆ 4 ಗಂಟೆ ಹೊತ್ತಿಗೆ ಮನೆಗೆ ವಾಪಸ್ ಆದೆವು. 6 ಗಂಟೆಯ ಬಳಿಕ ನಾವು ನಡೆದು ಬಂದ ಸೇತುವೆ ಕುಸಿದು ಬಿದ್ದ ಬಗ್ಗೆ ಸುದ್ದಿ ಕೇಳಿ ಆಶ್ಚರ್ಯಗೊಂಡೆವು ಎಂದು ಅಹಮದಾಬಾದ್ ಕುಟುಂಬಸ್ಥರು ಹೇಳಿದ್ದಾರೆ.
ಇನ್ನು ಮಾಹಿತಿಯ ಪ್ರಕಾರ, ಸೇತುವೆಯನ್ನು ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ಮುಕ್ತ ಮಾಡಲಾಗಿತ್ತು. ನಾಲ್ಕು ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಜನರು ಸೇತುವೆಗೆ ಭೇಟಿ ನೀಡಿದ್ದಾರೆ.
ಓದಿ: ಗುಜರಾತ್ ಸೇತುವೆ ದುರಂತ: ಮಡಿದವರ ಸಂಖ್ಯೆ 100ಕ್ಕೆ ಏರಿಕೆ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ