ಅಹಮದಾಬಾದ್: 2008ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟದ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯೇ ಸೂಕ್ತ. ಈ ಅಪರಾಧಿಗಳನ್ನು ಸಮಾಜದಲ್ಲಿರಲು ಬಿಡುವುದೆಂದರೆ ಅದು ಮನುಷ್ಯರನ್ನು ತಿನ್ನುವ ಚಿರತೆಯನ್ನು ಸಾರ್ವಜನಿಕವಾಗಿ ತಿರುಗಲು ಬಿಟ್ಟಂತೆ. ಏಕೆಂದರೆ, ಅದಕ್ಕೆ ಯಾವುದೇ ಕನಿಕರ ಇರಲಾರದು. ಅದು ಮುಗ್ಧ ಮಕ್ಕಳು, ಅಮಾಯಕ ಯುವಜನತೆ ಹಾಗು ವೃದ್ಧರು ಅಥವಾ ಇತರೆ ಜಾತಿ, ಧರ್ಮದ ಜನರನ್ನು ನಿರ್ದಯವಾಗಿ ತಿಂದು ಮುಗಿಸುತ್ತದೆ ಎಂದು ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಕುರಿತ ಆದೇಶದ ಪ್ರತಿ ಶನಿವಾರ ಸಾರ್ವಜನಿಕರ ಓದಿಗೆ ಲಭ್ಯವಾಗಿದೆ. ದೇಶದಲ್ಲಿ ಸಂಚಲನ ಸೃಷ್ಟಿಸಿದ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯವು ಬಾಂಬ್ ಸ್ಫೋಟದ ರೂವಾರಿಗಳಾದ ಪಾಕಿಸ್ತಾನ ಬೆಂಬಲಿತ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ 38 ಅಪರಾಧಿಗಳಿಗೆ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿತ್ತು. ಒಂದು ಪ್ರಕರಣದಲ್ಲಿ ಇಷ್ಟು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದ್ದು ದೇಶದಲ್ಲಿ ಇದು ಮೊದಲ ಸಲ ಎನ್ನುವುದು ಗಮನಾರ್ಹ ಸಂಗತಿ.
'ಈ ಅಪರಾಧಿಗಳು ಶಾಂತಿಯುತವಾಗಿದ್ದ ಸಮಾಜದಲ್ಲಿ ಕ್ಷೋಭೆ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲ, ದೇಶದಲ್ಲೇ ವಾಸಿಸುತ್ತಾ ಎಸಗಿದ ದೇಶದ್ರೋಹದ ಕೃತ್ಯವಿದು. ಇವರಿಗೆ ಕೇಂದ್ರದಲ್ಲಿ ಸಾಂವಿಧಾನಿಕವಾಗಿ ಆಯ್ಕೆಯಾದ ಸರ್ಕಾರದ ಮೇಲೆ ಯಾವುದೇ ಗೌರವವಿಲ್ಲ. ಇದರಲ್ಲಿ ಕೆಲವರು ಕೇವಲ ಅಲ್ಲಾಹುವಿನಲ್ಲಿ ಮಾತ್ರ ನಂಬಿಕೆ ಹೊಂದಿದ್ದಾರೆ. ಇವರು ಚುನಾಯಿತ ಸರ್ಕಾರವಾಗಲಿ, ನ್ಯಾಯಾಂಗ ವ್ಯವಸ್ಥೆಯಲ್ಲಾಗಲಿ ಕಿಂಚಿತ್ತೂ ಗೌರವ ಹೊಂದಿಲ್ಲ' ಎಂದು ವಿಶೇಷ ನ್ಯಾಯಮೂರ್ತಿ ಎ.ಆರ್.ಪಟೇಲ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಅಪರಾಧಿಗಳನ್ನು ಸರ್ಕಾರ ಜೈಲಿನಲ್ಲಿರಿಸುವ ಅವಶ್ಯಕತೆ ಇಲ್ಲ. ಅದರಲ್ಲೂ ಪ್ರಮುಖವಾಗಿ ಕೆಲವರು ಕೇವಲ ನಮ್ಮ ದೇವರಲ್ಲಿ ಮಾತ್ರ ನಂಬಿಕೆ ಇಡುತ್ತೇವೆ, ಮತ್ತೆ ಯಾವುದರಲ್ಲೂ ಅಲ್ಲ ಎಂದು ಹೇಳುತ್ತಾರೆ. ಹಾಗಾಗಿ, ದೇಶದಲ್ಲಿ ಯಾವುದೇ ಜೈಲು ಕೂಡಾ ಇಂಥವರನ್ನು ಸುದೀರ್ಘ ಕಾಲಾವಧಿಗೆ ಜೈಲಿನಲ್ಲಿರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಇಂಥವರನ್ನು ಸಮಾಜದಲ್ಲಿ ಬಿಡುವುದೆಂದರೆ, ಮನುಷ್ಯರನ್ನು ತಿನ್ನುವ ಚಿರತೆಯನ್ನು ಸಾರ್ವಜನಿಕವಾಗಿ ಬಿಡುವುದಕ್ಕೆ ಸಮ. ಏಕೆಂದರೆ, ಅದಕ್ಕೆ ಯಾವುದೇ ಕನಿಕರ ಇರಲಾರದು. ಅದು ಮುಗ್ಧ ಮಕ್ಕಳು, ಅಮಾಯಕ ಯುವಜನತೆ, ವೃದ್ಧರು ಅಥವಾ ಇತರೆ ಜಾತಿ, ಧರ್ಮದ ಜನರನ್ನು ನಿರ್ದಯವಾಗಿ ತಿಂದು ಮುಗಿಸುತ್ತದೆ ಎಂದು ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳುತ್ತದೆ.
ಇದನ್ನೂ ಓದಿ: ಲಷ್ಕರ್-ಇ-ತೊಯ್ಬಾಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಐಪಿಎಸ್ ಅಧಿಕಾರಿ ಬಂಧನ
ಇದೇ ವೇಳೆ, ಈ ಪ್ರಕರಣವು 'ಅತ್ಯಂತ ಅಪರೂಪಲ್ಲೇ ಅಪರೂಪದ ಪ್ರಕರಣ'ವಾಗಿದ್ದು, ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿವೇಚನೆಯಿಂದ ಕೂಡಿದ್ದಾಗಿದೆ ಎಂದು ತಿಳಿಸಿದೆ. ದೇಶದಲ್ಲಿದ್ದುಕೊಂಡು ಭಯೋತ್ಪಾದಕ ದುಷ್ಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆ ಒಂದೇ ಆಯ್ಕೆಯಾಗಬಲ್ಲದು. ಏಕೆಂದರೆ ಇದು ದೇಶದ ಶಾಂತಿ, ಅಪಾರ ಜನತೆಯ ಭದ್ರತೆಯ ವಿಚಾರ ಎಂದು ಕೋರ್ಟ್ ಆದೇಶದಲ್ಲಿ ಒತ್ತಿ ಹೇಳುತ್ತದೆ.
ಇದೇ ವೇಳೆ, ಈ ಪ್ರಕರಣದ ಕೆಲವು ಅಪರಾಧಿಗಳು, ತಾವು ಮುಸ್ಲಿ ಸಮುದಾಯದವರು ಎಂಬ ಕಾರಣಕ್ಕೆ ತಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಈ ವಾದವನ್ನು ತಳ್ಳಿ ಹಾಕಿ ಸ್ಪಷ್ಟನೆ ನೀಡಿರುವ ಕೋರ್ಟ್, ದೇಶದಲ್ಲಿ ಕೋಟ್ಯಂತರ ಮುಸ್ಲಿಮರಿದ್ದು ನೆಲದ ಕಾನೂನು ಪಾಲಿಸುತ್ತಿದ್ದಾರೆ ಎಂದು ತಿಳಿಸಿತು.