ಆಗ್ರಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ 9 ಜನ ಯುವಕರು ಮೃತಪಟ್ಟಿದ್ದರು. ಆದ್ರೆ ಆ ಮೃತ ಯುವಕರ ಪೋಷಕರು ಕಡು ಬಡವರಾಗಿದ್ದು, ಮಕ್ಕಳ ಮೃತದೇಹಗಳನ್ನು ಕೊಂಡೊಯ್ಯುವಷ್ಟು ಹಣವಿಲ್ಲದೇ ವಿಲವಿಲ ಒದ್ದಾಡುವ ಸ್ಥಿತಿ ಅವರಿಗೆ ಬಂದೊದಗಿದೆ.
ಆರ್ಮಿ ಭರ್ತಿಗಾಗಿ ತಯಾರಿ ನಡೆಸಿದ್ದ ಯುವಕರು...
ಈ 12 ಯುವಕರಿಗೆ ಹರಿಯಾಣದ ಹೋಟೆಲ್ ಒಂದರಲ್ಲಿ ವೇಟರ್ ಕೆಲಸ ಸಿಕ್ಕಿತ್ತು. ನೌಕರಿಗೆ ಹಾಜರಾಗಲು ಬಿಹಾರದ ಗಯಾದಿಂದ ಸ್ಕಾರ್ಪಿಯೋ ವಾಹನದ ಮೂಲಕ ಹರಿಯಾಣಕ್ಕೆ ಹೋಗುತ್ತಿದ್ದರು. ಅಲ್ಲದೆ ಇವರೆಲ್ಲರೂ ಆರ್ಮಿ ಸೇರಲು ಆರ್ಮಿ ಸಂದರ್ಶನಕ್ಕೂ ಈ ಮುನ್ನ ಹಾಜರಾಗಿದ್ದರು.
ರಸ್ತೆ ಅಪಘಾತ...
ಹರಿಯಾಣಗೆ ಹೋಗುತ್ತಿದ್ದ ವೇಳೆ ಆಗ್ರಾದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಟ್ರಕ್ ಮತ್ತು ಸ್ಕಾರ್ಪಿಯೋ ವಾಹನದ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಎಂಟು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮತ್ತೊಬ್ಬ ಯುವಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.
ಆಗ್ರಾಕ್ಕೆ ತೆರಳಿದ ಒಂದೇ ಒಂದು ಕುಟುಂಬ...!
ಸುದ್ದಿ ತಿಳಿದಾಕ್ಷಣವೇ ಮೃತ ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 9 ಮೃತ ಯುವಕರ ಕುಟುಂಬಸ್ಥರ ಪೈಕಿ ಒಂದೇ ಒಂದು ಕುಟುಂಬ ಮಾತ್ರ ಆಗ್ರಾ ತಲುಪಿದೆ. ಉಳಿದ ಎಂಟು ಕುಟುಂಬಸ್ಥರು ಆಗ್ರಾಕ್ಕೆ ತೆರಳಲು ಹಣವಿಲ್ಲದೇ ವಿಲವಿಲ ಒದ್ದಾಡುತ್ತಿದ್ದಾರೆ.
ಸಾವಿನಲ್ಲೂ ಒಂದಾದ ಸ್ನೇಹಿತರು!
ಅಪಘಾತದಲ್ಲಿ ಮೃತಪಟ್ಟ ಗುಡ್ಡು, ಬಬ್ಲು, ವಿಕಾಸ್, ನರೇಂದ್ರ ಮತ್ತು ಇತರ ಎಲ್ಲರೂ ಸ್ನೇಹಿತರಾಗಿದ್ದರು. ಇವರೆಲ್ಲರೂ ಉದ್ಯೋಗಕ್ಕೆ ಹಾಜರಾಗಲು ಬಿಹಾರದಿಂದ ಬಾಡಿಗೆ ಕಾರಿನಲ್ಲಿ ಹರಿಯಾಣದ ಸಿರ್ಸಾಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಸ್ನೇಹಿತರೆಲ್ಲರೂ ಸಾವನ್ನಪ್ಪಿದ್ದಾರೆ.
ಗುತ್ತಿಗೆಗಾರನಿಂದ ಬುಕ್ ಆಗಿದ್ದ ಕಾರು!
ಹರಿಯಾಣದ ಸಿರ್ಸಾ ಮೂಲದ ಮುನ್ಶಿ ಎಂಬ ಗುತ್ತಿಗೆದಾರ ಯುವಕರನ್ನು ಕೆಲಸಕ್ಕಾಗಿ ಕರೆಸಿಕೊಳ್ಳಲು ಬಿಹಾರದ ಗಯಾದಿಂದ ಬಾಡಿಗೆ ಕಾರನ್ನು ಬುಕ್ ಮಾಡಿದ್ದರು ಎಂದು ಮೃತ ಯುವಕರ ಕುಟುಂಬ ಹೇಳಿದೆ.
ವೇಟರ್ ಕೆಲಸ ಸಿಕ್ಕ ಖುಷಿಯಲ್ಲಿದ್ದ ಯುವಕರು!
ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಎಲ್ಲ ಯುವಕರು ಕಾರ್ಮಿಕರಾಗಿದ್ದರು. ಇವರಿಗೆ ಹರಿಯಾಣದ ಸಿರ್ಸಾದಲ್ಲಿ ವೇಟರ್ ಕೆಲಸ ಸಿಕ್ಕಿದೆ. ಇದರ ಖುಷಿಯಲ್ಲಿ ಯುವಕರಿದ್ದರು. ಇದಕ್ಕೂ ಮೊದಲೇ ಯುವಕರೆಲ್ಲರೂ ಅನೇಕ ಬಾರಿ ಹರಿಯಾಣಕ್ಕೆ ಉದ್ಯೋಗ ಹುಡುಕಾಟಕ್ಕೆ ತೆರಳುತ್ತಿದ್ದರು. ಆದರೆ ಕೆಲಸ ಸಿಗದೆ ಮತ್ತೆ ತಮ್ಮ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಅಪಘಾತದಲ್ಲಿ ಮೃತಪಟ್ಟ ನಾಗೇಂದ್ರ, ಗಾಯಗೊಂಡ ಚೋಟುವಿನ ಸ್ವಂತ ಸಹೋದರ. ನಾಗೇಂದ್ರನ ಮರಣದ ನಂತರ ಚೋಟು ದಿಗ್ಭ್ರಮೆಗೊಂಡಿದ್ದಾನೆ. ಸಹೋದರನ ಸಾವಿನ ಸುದ್ದಿ ಕೇಳಿ ಚೋಟು ದುಃಖ ನಿಲ್ಲುತ್ತಿಲ್ಲ.
ಕಡು ಬಡ ಕುಟುಂಬಗಳು...
ಮೃತ ಮತ್ತು ಗಾಯಗೊಂಡ ಎಲ್ಲ ಯುವಕರ ಕುಟುಂಬಗಳು ಕಡು ಬಡವರಾಗಿದ್ದಾರೆ. ದಿನಗೂಲಿಯಿಂದಲೇ ಅವರ ಕುಟುಂಬಗಳು ಸಾಗುತ್ತಿದ್ದವು. ತಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದ್ದರಿಂದ ಎಲ್ಲ ಕುಟುಂಬಗಳು ಸಂತಸದಲ್ಲಿದ್ದವು. ಆದರೆ ಉದ್ಯೋಗಕ್ಕೆ ಹಾಜರಾಗುವ ಮೊದಲೇ ಸಾವು ಅವರ ಮನೆ ಬಾಗಿಲು ಬಡಿಯುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ.
ಹಣವಿಲ್ಲದೇ ನರಳಾಡುತ್ತಿರುವ ಕುಟುಂಬಗಳು...
ತಮ್ಮ ಮಕ್ಕಳ ಶವವನ್ನು ಹಳ್ಳಿಗೆ ಕೊಂಡೊಯ್ಯಲು ಆಯಾ ಪೋಷಕರ ಬಳಿ ಹಣವಿಲ್ಲ. ಸಹಾಯ ಮಾಡುವಂತೆ ಕುಟುಂಬಸ್ಥರು ಸಂಬಂಧಿಕರ ಬಳಿ ಮತ್ತು ಆಗ್ರಾ ಆಡಳಿತದಿಂದ ಸಹಾಯವನ್ನು ಕೋರಿದ್ದಾರೆ. ಆಗ್ರಾ ಆಡಳಿತ ಸಹಾಯಕ್ಕೆ ದೌಡಾಯಿಸಿದ್ರೆ ತಮ್ಮ ಮೃತ ಮಕ್ಕಳ ಮುಖವನ್ನು ಪೋಷಕರು ನೋಡುವಂತಾಗುತ್ತದೆ.