ಆಗ್ರಾ (ಉತ್ತರ ಪ್ರದೇಶ): ಆಗ್ರಾ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆ ಮತ್ತು ಗರ್ಭಪಾತ ದಂಧೆ ನಡೆಸುತ್ತಿದ್ದ ಜಾಲಗಳ ಮೇಲೆ ಇಲ್ಲಿನ ಪೊಲೀಸರು ಮತ್ತು ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸಿಎಂಒ ಡಾ. ಅರುಣ್ ಶ್ರೀವಾತ್ಸವ್ ಮಾತನಾಡಿ, ಜಿಲ್ಲೆಯಲ್ಲಿ ಹಲವೆಡೆ ಭ್ರೂಣಲಿಂಗ ಪತ್ತೆ ಪರೀಕ್ಷೆ ದಂಧೆ ನಡೆಯುತ್ತಿದೆ. ಇಲ್ಲಿ ಆಗ್ರಾದ ಜೊತೆಗೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದ ಗರ್ಭಿಣಿಯರನ್ನು ಕರೆಸಿ ಭ್ರೂಣದ ಲಿಂಗದ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಬಹುತೇಕ ಭ್ರೂಣಲಿಂಗ ಪತ್ತೆ ಪರೀಕ್ಷೆ ಕೇಂದ್ರಗಳಲ್ಲಿ ಈ ಕುರಿತು ಯಾವುದೇ ರೀತಿಯ ಬೋರ್ಡ್ ಹಾಕಿಲ್ಲ. ಇಲ್ಲಿನ ಗ್ರಾಮದ ಜನರಿಗೂ ಇವರ ಬಗ್ಗೆ ಮಾಹಿತಿ ಇಲ್ಲ. ದಂಧೆಕೋರರು ಎರಡ್ಮೂರು ತಿಂಗಳಿಗೊಮ್ಮೆ ತಮ್ಮ ಸ್ಥಳವನ್ನು ಬದಲಾಯಿಸುತ್ತಾರೆ. ಇದರಿಂದಾಗಿ ಅವರು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಬಂಧಿತ ಆರೋಪಿಗಳಾದ ವಿಕ್ರಮ್ ಮತ್ತು ಸಹಚರ ಸರಿತಾ ಪೊಲೀಸರ ವಿಚಾರಣೆಯಲ್ಲಿ ಆಗ್ರಾ, ಹತ್ರಾಸ್, ಅಲಿಗಢ, ಮಥುರಾ, ಇಟಾ, ಮೈನ್‌ಪುರಿ, ಫಿರೋಜಾಬಾದ್ ಹಾಗೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ವೈದ್ಯರ ಜೊತೆ ಸೇರಿ ಭ್ರೂಣಲಿಂಗ ಪತ್ತೆ ಪರೀಕ್ಷೆಯ ಜಾಲ ನಡೆಸುತ್ತಿರುವುದಾಗಿ ಮತ್ತು ಈ ಕೆಲಸಕ್ಕಾಗಿ ಕಮಿಷನ್ ಪಡೆಯುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಆರಕ್ಕೂ ಹೆಚ್ಚು ಕಡೆ ಲಿಂಗ ನಿರ್ಣಯ ಪರೀಕ್ಷೆಯ ದಂಧೆ ನಡೆಯುತ್ತಿರುವುದು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ತನಿಖೆಯಿಂದ ಬೆಳಕಿಗೆ ಬಂದಿದೆ. ಹಲವು ಬಾರಿ ಆರೋಗ್ಯ ಇಲಾಖೆಗೂ ಇಲ್ಲಿಂದ ಖಚಿತ ಮಾಹಿತಿ ಬಂದಿತ್ತು. ಈ ದಂಧೆಯಲ್ಲಿ ಪಿಸಿಪಿಎನ್‌ಡಿಟಿ ತಂಡದ ನೋಡಲ್ ಅಧಿಕಾರಿ ಪಾತ್ರ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಏಕೆಂದರೆ, ಭ್ರೂಣಲಿಂಗ ಪತ್ತೆ ಪರೀಕ್ಷೆಯ ದಂಧೆ ಸಿಕ್ಕಿಬಿದ್ದಾಗ ನೋಡಲ್ ಅಧಿಕಾರಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರಲಿಲ್ಲ.
ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಪಿನಾಹತ್ ಪ್ರದೇಶದ 3 ಆಸ್ಪತ್ರೆಗಳಲ್ಲಿ ಅಕ್ರಮ ಗರ್ಭಪಾತ ಪ್ರಕರಣದ ಕುರಿತು ಅನೇಕ ದೂರುಗಳು ಬಂದಿವೆ. ಆದರೆ ಯಾರು ಲಿಖಿತ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಈ ಆಸ್ಪತ್ರೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಯಾರೂ ಲಿಖಿತ ದೂರು ನೀಡುವುದಿಲ್ಲ ಎಂದು ಪಿನಾಹತ್ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಡಾ.ವಿಜಯ್ ಕುಮಾರ್ ಹೇಳಿದ್ದಾರೆ.
ಸದ್ಯ ಆಗ್ರಾ ಪೊಲೀಸರು ಬಂಧಿತ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಬಂಧಿತ ಸರಿತಾ ಮತ್ತು ಮಾಸ್ಟರ್ ಮೈಂಡ್ ವಿಕ್ರಮ್ ಅವರ ಜಾಡು ಹಿಡಿದು ಇದೀಗ ಎರಡನೇ ಭ್ರೂಣಲಿಂಗ ಪತ್ತೆ ಪರೀಕ್ಷೆಯ ಸ್ಥಳಗಳನ್ನು ಪೊಲೀಸರು ಮತ್ತು ಆರೋಗ್ಯ ಇಲಾಖೆ ತಂಡಗಳು ಜಾಲಾಡುತ್ತಿವೆ. ಈ ದಂಧೆಯಲ್ಲಿ ಹಲವು ವೈದ್ಯರು ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: 10 ಮಂದಿ ಪೊಲೀಸರು ಹುತಾತ್ಮ