ನವದೆಹಲಿ: ಈ ಯೋಜನೆಯು ದೇಶದ ಯುವಕರನ್ನು ಕೊಲ್ಲುತ್ತದೆ ಮತ್ತು ಸೇನೆಯನ್ನು ಮುಗಿಸುತ್ತದೆ ಎಂದು ಅಗ್ನಿಪಥ್ ಯೋಜನೆ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಸರ್ಕಾರ ಬಡವರು ಮತ್ತು ಯುವಕರಿಗಾಗಿ ಕೆಲಸ ಮಾಡುತ್ತಿಲ್ಲ. ದೊಡ್ಡ ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಯೋಜನೆಯ ವಿರುದ್ಧ ಆಂದೋಲನ ನಡೆಸುತ್ತಿರುವವರನ್ನು ಬೆಂಬಲಿಸಿ ಪಕ್ಷವು ಇಂದು ನಡೆಸಿದ 'ಸತ್ಯಾಗ್ರಹ' ಪ್ರತಿಭಟನೆಯಲ್ಲಿ ಈ ರೀತಿ ಹೇಳಿಕೆ ನೀಡಿದರು.
ಅಗ್ನಿಪಥ್ ಯೋಜನೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವಂತೆ ಯುವಕರಿಗೆ ಮನವಿ ಮಾಡಿದ ಅವರು, ಪಕ್ಷದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ದಯವಿಟ್ಟು ಈ ಸರ್ಕಾರದ ಉದ್ದೇಶವನ್ನು ಗಮನಿಸಿ ಮತ್ತು ಅದನ್ನು ಉರುಳಿಸಿ. ರಾಷ್ಟ್ರಕ್ಕೆ ಸತ್ಯವಾದ ಮತ್ತು ದೇಶದ ಆಸ್ತಿಯನ್ನು ರಕ್ಷಿಸುವ ಸರ್ಕಾರವನ್ನು ತನ್ನಿ. ಶಾಂತಿಯುತವಾಗಿ ಹೋರಾಡಲು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಪ್ರತಿಭಟಿಸಿ ಆದರೆ, ನಿಲ್ಲಿಸಬೇಡಿ, ಎಂದು ಹೇಳಿದರು.
ಇತ್ತೀಚೆಗೆ ಆರಂಭಿಸಲಾದ ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ಯುವಕರ ಆಂದೋಲನದಿಂದಾಗಿ ಶುಕ್ರವಾರ ಸುಮಾರು 340 ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತರುವ ಪ್ರಯತ್ನದಲ್ಲಿ ಜೂನ್ 14 ರಂದು ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಿತ್ತು. ಹೊಸ ಸೇನಾ ನೇಮಕಾತಿ ಯೋಜನೆಯು ಈ ರೀತಿಯ ವಿರೋಧದಿಂದ ಹಿನ್ನಡೆಯನ್ನು ಎದುರಿಸುತ್ತಿದೆ.
ಇದನ್ನೂ ಓದಿ: ಅಗ್ನಿಪಥ ಗಲಾಟೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ: ಆರಗ ಜ್ಞಾನೇಂದ್ರ