ಪಾಟ್ನಾ: ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸತತ ಎರಡನೇ ದಿನವೂ ಹಿಂಸಾಚಾರಕ್ಕೆ ತಿರುಗಿದ್ದು, ಉದ್ಯೋಗಾಕಾಂಕ್ಷಿಗಳು ಗುರುವಾರ ತಮ್ಮ ಆಕ್ರೋಶ ಪ್ರದರ್ಶಿಸಲು ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು.
ಜಹಾನಾಬಾದ್, ಛಾಪ್ರಾ ಮತ್ತು ನವಾಡ ಸೇರಿದಂತೆ ಬಿಹಾರದ ಹಲವಾರು ಪ್ರದೇಶಗಳಲ್ಲಿ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡು ಬಂದಿವೆ. ಆದರೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇಂದು ಜಹಾನಾಬಾದ್ ರೈಲು ನಿಲ್ದಾಣದಲ್ಲಿ ಸಾವಿರಾರು ಯುವಕರು ಜಮಾಯಿಸಿ ಹಳಿ ತಡೆದು ಪ್ರತಿಭಟನೆ ನಡೆಸಿದರು. ಯೋಜನೆಯನ್ನು ಹಿಂತೆಗೆದುಕೊಳ್ಳಲು ಮತ್ತು ಸಾಮಾನ್ಯ ಪ್ರಕ್ರಿಯೆಯಲ್ಲಿ ನೇಮಕಾತಿಗೆ ಒತ್ತಾಯಿಸಿ, ಪ್ರತಿಭಟನಾಕಾರರು ಪಾಟ್ನಾ-ಗಯಾ ರಸ್ತೆ ಮಾರ್ಗ ಮತ್ತು ಪಾಟ್ನಾ-ಗಯಾ ಪ್ಯಾಸೆಂಜರ್ ರೈಲನ್ನು ತಡೆದು ತಮ್ಮ ಆಕ್ರೋಶ ಹೊರ ಹಾಕಿದರು.
ಓದಿ: ಸೇನಾಪಡೆಗಳಿಗೆ ಹೊಸ ರೂಪ ನೀಡುವ 'ಅಗ್ನಿಪಥ್' ಯೋಜನೆ ಘೋಷಣೆ.. ಅದರ ಪೂರ್ಣ ಮಾಹಿತಿ ಇಲ್ಲಿದೆ
ರೈಲ್ವೆ ಅಧಿಕಾರಿಗಳು ಜಿಲ್ಲಾ ಪೊಲೀಸರೊಂದಿಗೆ ಪ್ರತಿಭಟನಾಕಾರರನ್ನು ಮನವೋಲಿಸಲು ಪ್ರಯತ್ನಿಸಿದರು. ಸುಗಮ ಸಂಚಾರಕ್ಕೆ ಮತ್ತು ರೈಲ್ವೆ ಹಳಿಯಿಂದ ವಾಪಸ್ ಬರಲು ವಿನಂತಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾಟ್ನಾ-ಗಯಾ ಮುಖ್ಯ ರಸ್ತೆಯ ಕಾಕೋ ಮೋರ್‌ನಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಟೈರ್‌ಗಳನ್ನು ಸುಟ್ಟು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಕೆಲವರು, ಕೇಂದ್ರವು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಅವರು ಅಗ್ನಿವೀರ್ರನ್ನು ನೇಮಿಸಿಕೊಳ್ಳುತ್ತಿಲ್ಲ. ನಾಲ್ಕು ವರ್ಷಗಳಿಂದ 'ಬಲಿ ಕಾ ಬಕ್ರಾ' ಅನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮತ್ತೊಂದು ಗುಂಪು ಕೈಮೂರ್ ಜಿಲ್ಲೆಯ ‘ಭಬುವಾ ರೋಡ್’ ರೈಲು ನಿಲ್ದಾಣದಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಕೋಚ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿತು. ಪ್ರಯಾಣಿಕರು ರೈಲಿನಿಂದ ಇಳಿದ ನಂತರ ವಿದ್ಯಾರ್ಥಿಗಳ ಗುಂಪು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಹಚ್ಚಿದ ಟೈರ್ ಎಸೆದರು.
ಪ್ರತಿಭಟನಾಕಾರರು ನಾವಡ ರೈಲು ನಿಲ್ದಾಣ ಮತ್ತು ಜನನಿಬಿಡ ಪ್ರಜಾತಂತ್ರ ಚೌಕ್‌ನಲ್ಲಿ ಟೈರ್‌ಗಳನ್ನು ಸುಟ್ಟುಹಾಕಿದರು. ಭಾರೀ ಪ್ರತಿಭಟನೆಯಿಂದಾಗಿ ಗಯಾ - ಕೆಯುಲ್ ರೈಲು ವಿಭಾಗದ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಹೌರಾ - ಗಯಾ ಎಕ್ಸ್‌ಪ್ರೆಸ್ ರೈಲ್ನ್ನು ವಾರ್ಸಾಲಿಗಂಜ್ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಈ ಮಾರ್ಗದ ಹಲವಾರು ರೈಲುಗಳನ್ನು ಸಹ ಹಲವಾರು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಅರ್ರಾದಿಂದ ಕಲ್ಲು ತೂರಾಟದ ಘಟನೆಗಳೂ ವರದಿಯಾಗಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿಯು ಅಧಿಕೃತವಾಗಿ ಅನುಮೋದಿಸಿದ ಅಗ್ನಿಪಥ್ ನೇಮಕಾತಿ ಯೋಜನೆಯು ನಾಲ್ಕು ವರ್ಷಗಳ ಅವಧಿಗೆ ಒಪ್ಪಂದದ ಆಧಾರದ ಮೇಲೆ ಸೇನಾ ಅಧಿಕಾರಿಗಳ ನೇಮಕಾತಿಯನ್ನು ಪ್ರಸ್ತಾಪಿಸಿದೆ. ಈ ಅಧಿಕಾರಿಗಳು ಅಂತಿಮ ಪಿಂಚಣಿ ಪ್ರಯೋಜನಗಳನ್ನು ನಿಗದಿಪಡಿಸುವ ಪರಿಗಣನೆಗೆ ಅರ್ಹರಾಗಿರುವುದಿಲ್ಲ. ಆದ್ದರಿಂದ ಇದನ್ನು ಹೊರ ತರುವಂತೆ ಒತ್ತಾಯಿಸಿ ಸೇನಾ ಆಕಾಂಕ್ಷಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.