ಚೆನ್ನೈ( ತಮಿಳುನಾಡು): ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಉತ್ತರ ಪ್ರದೇಶ, ಬಿಹಾರ, ಹರಿಯಾಣ, ತೆಲಂಗಾಣ ಸೇರಿದಂತೆ ಕೆಲ ರಾಜ್ಯಗಳಲ್ಲಿ ರೈಲಿಗೆ ಬೆಂಕಿ ಹಚ್ಚಿ, ಖಾಸಗಿ ಹಾಗೂ ಸಾರ್ವಜನಿಕ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆ ಹಲವಾರು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಶುಕ್ರವಾರ ತಿಳಿಸಿದೆ.
ತಿರುವನಂತಪುರಂ - ಸಿಕಂದರಾಬಾದ್ ಶಬರಿ ಎಕ್ಸ್‌ಪ್ರೆಸ್ ರೈಲು ರದ್ದುಗೊಳಿಸಲಾಗಿದ್ದು, ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್, ಎರ್ನಾಕುಲಂ-ಬರೌನಿ ರಪ್ತಿಸಾಗರ್ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು ದಾನಪುರ ಸಂಘಮಿತ್ರ ಎಕ್ಸ್‌ಪ್ರೆಸ್ ಅನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ದಕ್ಷಿಣ ಮಧ್ಯ ರೈಲ್ವೆ ಮತ್ತು ಪೂರ್ವ ಕರಾವಳಿ ರೈಲ್ವೆ ಹೈದರಾಬಾದ್ ವಲಯಗಳಲ್ಲಿ ಪ್ರತಿಭಟನೆಯ ಕಾವು ಜೋರಾದ ಹಿನ್ನೆಲೆ ಜೂನ್ 18 ರಂದು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ಹೈದರಾಬಾದ್ ತಾಂಬರಂ-ಚಾರ್ಮಿನಾರ್ ಎಕ್ಸ್‌ಪ್ರೆಸ್, ಬೆಂಗಳೂರು-ದಾನಪುರ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್-ಹೈದರಾಬಾದ್ ಎಕ್ಸ್‌ಪ್ರೆಸ್ ಮತ್ತು ತಾಂಬರಂ-ಹೈದರಾಬಾದ್ ಚಾರ್ಮಿನಾರ್ ಎಕ್ಸ್‌ಪ್ರೆಸ್ ರದ್ದುಗೊಳಿಸಲಾಗಿದೆ. ಎರ್ನಾಕುಲಂ-ಪಾಟ್ನಾ ಬೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಜೂನ್ 20 ರಂದು ಸ್ಥಗಿತಗೊಂಡಿದೆ.
ರಾಜಕೀಯ ನಾಯಕರಿಗೆ 5 ವರ್ಷ ಅಧಿಕಾರದ ಅವಧಿಯಿದೆ. ಆದರೆ, 4 ವರ್ಷಗಳಲ್ಲಿ ನಮಗೆ ಏನಾಗುತ್ತದೆ?, ಪಿಂಚಣಿ ಸೌಲಭ್ಯವೂ ಇಲ್ಲ. 4 ವರ್ಷಗಳ ನಂತರ ನಾವು ಬೀದಿಗೆ ಬರುತ್ತೇವೆ. ನಾಲ್ಕು ವರ್ಷ ಪೂರ್ಣಗೊಂಡ ಬಳಿಕ ಶೇ.25ರಷ್ಟು ಅಗ್ನಿವೀರರನ್ನು ಕಾಯಂ ಕೇಡರ್ ಗೆ ಸೇರಿಸಿಕೊಂಡರೂ ಉಳಿದ ಶೇ, 75 ರಷ್ಟು ಮಂದಿ ಏನು ಮಾಡಬೇಕು? ಎಂದು ಪ್ರಶ್ನಿಸಿ ಯುವಕರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.