ಪಾಟ್ನಾ( ಬಿಹಾರ): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ ನೇಮಕ ವಿರೋಧಿಸಿ ಇಂದು ಭಾರತ ಬಂದ್ ನಡೆಯುತ್ತಿದೆ. ಬಿಹಾರದಲ್ಲಿ ಬಂದ್ ಬಿಸಿ ಜೋರಾಗೇ ಇದೆ. ಯುವಕರು ಅಗ್ನಿಪಥಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಹಾರ ಸರ್ಕಾರವು 20 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಜೂನ್ 17 ರಿಂದ 12 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಆದೇಶ ಈಗಾಗಲೇ ಜಾರಿಯಲ್ಲಿದೆ ಮತ್ತು ಇನ್ನೂ ಎಂಟು ಜಿಲ್ಲೆಗಳಿಗೂ ಈ ನಿಷೇಧವನ್ನು ವಿಸ್ತರಿಸಿ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ. ಇಂಟರ್‌ನೆಟ್ ಸೇವೆಗಳ ಅಮಾನತು ಮಾಡಿರುವುದರಿಂದ ಹಿಂಸಾಚಾರ ತಕ್ಕಮಟ್ಟಿಗೆ ತಹಬದಿಗೆ ಬಂದಿದೆ. ಹಿಂಸಾತ್ಮಕ ಘಟನೆಗಳು ತೀವ್ರವಾಗಿ ಕಡಿಮೆಯಾಗಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿರುವ ಸರ್ಕಾರದ ನಿರ್ಧಾರದಿಂದಾಗಿ ಚಳವಳಿಗಾರರು ಮತ್ತು ಸಮಾಜ ವಿರೋಧಿಗಳು ರಾಜ್ಯದಲ್ಲಿ ವದಂತಿಗಳನ್ನು ಹರಡುವ ಯತ್ನದಲ್ಲಿ ವಿಫಲರಾಗಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಲ್ಲೆಲ್ಲಿ ಇಂಟರ್ನೆಟ್ ಸ್ಥಗಿತ: ಕೈಮೂರ್, ಭೋಜ್‌ಪುರ, ಔರಂಗಾಬಾದ್, ರೋಹ್ತಾಸ್, ಬಕ್ಸರ್, ನಾವಡಾ, ಪಶ್ಚಿಮ ಚಂಪಾರಣ್, ಸಮಸ್ತಿಪುರ್, ಲಖಿಸರಾಯ್, ಬೇಗುಸರಾಯ್, ವೈಶಾಲಿ, ಸರನ್, ಮುಜಾಫರ್‌ಪುರ್, ಮೋತಿಹಾರಿ, ದರ್ಬಂಗಾ, ಗಯಾ, ಮಧುಬನಿ, ಜಹಾನಾಬಾದ್, ಖಗಾರಿಯಾ ಮತ್ತು ಶೇಖ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಟೆಲಿಕಾಂ ಕಂಪನಿಗಳಿಂದ ಸಂದೇಶ ರವಾನೆ: ಸೋಮವಾರದಿಂದ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳು ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಿವೆ. ಆದಾಗ್ಯೂ, ಈ ಜಿಲ್ಲೆಗಳ ಗ್ರಾಹಕರು ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ.
ಬಿಜೆಪಿ ಕಚೇರಿಗಳಿಗೆ ರಕ್ಷಣೆ: ಇದೇ ವೇಳೆ, ಬಿಹಾರ ಸರ್ಕಾರ 11 ಜಿಲ್ಲೆಗಳ ಬಿಜೆಪಿ ಕಚೇರಿಗಳ ಭದ್ರತೆಯನ್ನು ಹೆಚ್ಚಿಸಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಹಾರ ಪೊಲೀಸರು ಶಾಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಸಿಬ್ಬಂದಿಯನ್ನು ಬಿಜೆಪಿ ಕಚೇರಿಗಳಲ್ಲಿ ನಿಯೋಜಿಸಿದ್ದಾರೆ. 11 ಜಿಲ್ಲೆಗಳೆಂದರೆ ಸುಪೌಲ್, ಕಿಶನ್‌ಗಂಜ್, ಪೂರ್ಣೆಯಾ, ಸಹರ್ಸಾ, ದರ್ಬಂಗಾ, ಭಾಗಲ್ಪುರ್, ನೌಗಾಚಿಯಾ, ಬಂಕಾ, ಕತಿಹಾರ್, ಮಾಧೇಪುರ ಮತ್ತು ಮೋತಿಹಾರಿಗಳಾಗಿವೆ. ಪ್ರತಿ ಬಿಜೆಪಿ ಕಚೇರಿಯಲ್ಲಿ 30 ಸಿಬ್ಬಂದಿಯನ್ನು ಒಳಗೊಂಡ ಒಂದು ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬಿಜೆಪಿ ನಾಯಕರಿಗೂ ಭದ್ರತೆ: ಬಿಹಾರದ ಕಮಲ ನಾಯಕರಿಗೂ ಭದ್ರತೆ ಹೆಚ್ಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಉಪ ಮುಖ್ಯಮಂತ್ರಿ ರೇಣುದೇವಿಗೆ ರಕ್ಷಣೆ ನೀಡಲಾಗಿದೆ. ಗುರುವಾರ ಮತ್ತು ಶುಕ್ರವಾರ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಶಾಸಕಿ ಅರುಣಾ ದೇವಿ, ಶಾಸಕ ವಿನಯ್ ಬಿಹಾರಿ ಮತ್ತು ಇತರರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆಲ್ಲ ಭದ್ರತೆ ನೀಡಲಾಗಿದೆ. ಅಷ್ಟೇ ಅಲ್ಲ 10 ಬಿಜೆಪಿ ನಾಯಕರಿಗೆ ಕೇಂದ್ರ ಸರ್ಕಾರ ವೈ ಕೆಟಗರಿ ಭದ್ರತೆ ನೀಡಿದೆ.
ಇದನ್ನು ಓದಿ:ಅಗ್ನಿಪಥ್ ವಿರೋಧಿ ಪ್ರತಿಭಟನೆ ಬೆನ್ನಲ್ಲೇ ಅಗ್ನಿವೀರರಿಗೆ ಉದ್ಯೋಗ ನೀಡುವುದಾಗಿ ಆಫರ್ ಕೊಟ್ಟ ಆನಂದ್ ಮಹೀಂದ್ರಾ