ವಿಜಯನಗರಂ(ಆಂಧ್ರಪ್ರದೇಶ): ಕೇಂದ್ರ ಸರ್ಕಾರ ಘೋಷಿಸಿರುವ ಅಲ್ಪಾವಧಿಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರುದ್ಧ ಭುಗಿಲೆದ್ದಿರುವ ಆಕ್ರೋಶ, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನೆ ಹಿನ್ನೆಲೆ ಹಲವೆಡೆ ರೈಲು ಸೇವೆ ಸ್ಥಗಿತಗೊಂಡಿದ್ದು ಪ್ರಯಾಣಿಕರಿಗೆ ತೊಂದರೆಯಾಗಿದೆ. ಅಸ್ವಸ್ಥಗೊಂಡಿದ್ದ ರೈಲು ಪ್ರಯಾಣಿಕರೋರ್ವರು ಪ್ರಾಥಮಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ವಿಜಯನಗರಂನಲ್ಲಿ ಸಂಭವಿಸಿದೆ.
ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹಿನ್ನೆಲೆ, ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಕೊತ್ತವಲಸ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ಕೊರ್ಬಾ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲನ್ನು ತಡೆದಿದ್ದಾರೆ. ರೈಲು ಸೇವೆ ಸ್ಥಗಿತಗೊಂಡ ಹಿನ್ನೆಲೆ, ಪ್ರಯಾಣಿಕರು ವಿಶಾಖಪಟ್ಟಣಂ ತಲುಪಲು ಬಸ್ ಮತ್ತು ಆಟೋಗಳನ್ನು ಅವಲಂಬಿಸುವಂತಾಯಿತು.
ಇದನ್ನೂ ಓದಿ: ಅಗ್ನಿಪಥ್ಗೆ ಆಕ್ರೋಶ: 60 ಕಿ.ಮೀ ಓಡಿ ಅಸಮಾಧಾನ ಹೊರಹಾಕಿದ ಸೇನಾ ಉದ್ಯೋಗದ ಆಕಾಂಕ್ಷಿ!
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಒಡಿಶಾದ ಕಲಹಂಡಿ ಜಿಲ್ಲೆಯ ನಹುಪಾಡದ ಜೋಗೇಶ್ ಬೆಹೆರಾ (75) ಅವರು ರೈಲಿನಲ್ಲಿ ಅಸ್ವಸ್ಥಗೊಂಡಿದ್ದರು. ಆದ್ರೆ ವಿಶಾಖಪಟ್ಟಣಂಗೆ ತೆರಳಲು ಖಾಸಗಿ ಆ್ಯಂಬುಲೆನ್ಸ್ ಲಭ್ಯವಾಗದ ಕಾರಣ, ಕುಟುಂಬಸ್ಥರು ಕೊತ್ತವಲಸದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ದುರಾದೃಷ್ಟವಶಾತ್ ಪ್ರಾಥಮಿಕ ಚಿಕಿತ್ಸೆ ವೇಳೆ ಜೋಗೇಶ್ ಬೆಹೆರಾ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.