ಉತ್ತರ ಪ್ರದೇಶ: ಜನ್ಮ ಜನ್ಮಾಂತರದ ಬಂಧ, ಋಣಾನುಬಂಧ, ಏಳೇಳು ಜನ್ಮಗಳ ಬಂಧ.. ಹೀಗೆ ಇಂತಹ ಪದಬಳಕೆಯನ್ನು ನಾವು ಜನರ ಆಡುಮಾತಿನಲ್ಲಿ ಪ್ರತಿನಿತ್ಯ ಕೇಳುತ್ತಲೇ ಇರುತ್ತೇವೆ. ನೀವು ಅನೇಕ ಚಲನಚಿತ್ರಗಳಲ್ಲಿ ಸಹ ಪುನರ್ ಜನ್ಮದ ಕುರಿತಾದ ಸೀನ್ಗಳನ್ನು ನೋಡಿದ್ದೀರಿ. ಆದರೆ ಕೆಲವೊಂದು ಮರುಹುಟ್ಟಿನ ಕಥೆಗಳು ವಾಸ್ತವವಾಗಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.
ಉತ್ತರ ಪ್ರದೇಶದ ಔಚಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಸಲೇಹಿ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 8 ವರ್ಷದ ಬಾಲಕನೋರ್ವ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ಮನೆಗೆ ಆಗಮಿಸಿ, ಪ್ರಮೋದ್ನನ್ನು ತಂದೆ ಮತ್ತು ಆತನ ಹೆಂಡತಿಯನ್ನು ತಾಯಿ ಎಂದು ಕರೆಯಲು ಆರಂಭಿಸಿದ. ಮೊದ ಮೊದಲು ಪ್ರಮೋದ್ಗೆ ಏನೂ ಅರ್ಥವಾಗಲಿಲ್ಲ, ನಂತರ ಸ್ನಾನ ಮಾಡುತ್ತಿದ್ದ ವೇಳೆ ಬಾಲಕ, ನಾನು ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಪ್ರಮೋದ್ ಮತ್ತು ಆತನ ಪತ್ನಿ ಮಗುವನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ.
ಪ್ರಮೋದ್ಗೆ ರೋಹಿತ್ ಎಂಬ ಮಗನಿದ್ದನು. ಈತ 2013 ರಲ್ಲಿ 13ನೇ ವಯಸ್ಸಿಗೆ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದನು.
8 ವರ್ಷದ ಕರ್ಮವೀರ ತನ್ನ ಜೀವನದ ಹಿಂದಿನ ಕತೆಯನ್ನು ಈ ಜನ್ಮದ ತಂದೆಯಾದ ರಾಮನರೇಶ್ ಬಳಿ ಹೇಳಿಕೊಂಡಿದ್ದಾನೆ. ನಂತರ ರಾಮನರೇಶ್ ಇದನ್ನು ಪರೀಕ್ಷಿಸಲು ಪ್ರಮೋದ್ ಮನೆಗೆ ಕರ್ಮವೀರನನ್ನು ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಬಾಲಕ ತನ್ನ ಹಿಂದಿನ ಜೀವನದ ಕತೆಯನ್ನು ಹೇಳಿದ್ದಾನೆ. ಈ ವೇಳೆ ಕರ್ಮವೀರನ ಪುನರ್ ಜನ್ಮದ ಕತೆ ಕೇಳಲು ಜನರ ಗುಂಪು ನೆರೆದಿತ್ತು. ಅಷ್ಟೇ ಅಲ್ಲದೆ ನಾಗ್ಲಾ ಸಲೇಹಿ ಶಾಲೆಯ ಮುಖ್ಯೋಪಾಧ್ಯಾಯರಾದ ಸುಭಾಷ್ ಯಾದವ್ ಅವರು ಕರ್ಮವೀರನನ್ನು ಶಾಲೆಗೆ ಕರೆದುಕೊಂಡು ಹೋಗಿ ಅವನ ಹಿಂದಿನ ಜನ್ಮದ ತರಗತಿಯ ಬಗ್ಗೆ ಸಹ ಹೇಳಿದರು. ಈ ಸಮಯದಲ್ಲಿ ಕರ್ಮವೀರ ಎಲ್ಲವನ್ನು ಚಾಚೂ ತಪ್ಪದೆ ಹೇಳಿ, ಸುತ್ತಮುತ್ತಲಿನ ಜನರು ಆಶ್ಚರ್ಯಚಕಿತರಾಗುವಂತೆ ಮಾಡಿದ್ದಾನೆ.