ಹರಿದ್ವಾರ: ಉತ್ತರಪ್ರದೇಶದ ಗೋರಖನಾಥ ದೇವಾಲಯದ ಭದ್ರತಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ನಡೆದ ದಾಳಿಗೆ ಹರಿದ್ವಾರದ ಸಂತ ಶ್ರೇಷ್ಠರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಮಠ ಮಂದಿರಗಳ ಮೇಲೂ ಈ ದಾಳಿ ನಡೆಯಲೂಬಹುದು. ಹೀಗಾಗಿ ಮೊದಲು ಮದರಸಾಗಳನ್ನು ಮುಚ್ಚಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ರನ್ನು ಆಗ್ರಹಿಸಿದ್ದಾರೆ.
ಹಿಂದೂಗಳ ನಂಬಿಕೆಯ ಕೇಂದ್ರವಾಗಿರುವ ಉತ್ತರ ಪ್ರದೇಶದ ಗೋರಖ್‌ಪುರದ ಗೋರಖನಾಥ ದೇಗುಲದಲ್ಲಿ ನಡೆದ ದಾಳಿಯು ಹಿಂದೂಗಳು ಎಚ್ಚೆತ್ತುಕೊಳ್ಳುವ ಸಂಕೇತವಾಗಿದೆ. ಇದು ಕೇವಲ ಆರಂಭವಷ್ಟೇ, ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಲೂಬಹುದು. ಹೀಗಾಗಿ ಇಂತಹ ಕೃತ್ಯಗಳ ಬಗ್ಗೆ ಈಗಲೇ ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಮಠ- ಮಂದಿರಗಳ ಮೇಲೂ ದಾಳಿ ಮುಂದುವರಿಯಲಿದೆ ಎಂದು ಶಾಂಭವಿ ಧಾಮದ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್ ಹೇಳಿದ್ದಾರೆ.
ಸಂತರು ಮತ್ತು ಮಠಗಳು ಇಂತಹ ಕೃತ್ರಿಮ ಮನಸ್ಥಿತಿಯ ಜನರ ಗುರಿಯಾಗಿವೆ. ಒಂದು ಸಮುದಾಯದ ವ್ಯಕ್ತಿ ನಿಷೇಧಿತ ವಸ್ತುಗಳ ಸಮೇತ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದು ದೊಡ್ಡ ಸಂಚಾಗಿದೆ. ಈ ಸಮಾಜದಲ್ಲಿ ನಾವು ಎಷ್ಟು ಸುರಕ್ಷಿತರು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಸ್ವಾಮಿ ಆನಂದ್ ಸ್ವರೂಪ್ ಕಳವಳ ವ್ಯಕ್ತಪಡಿಸಿದ್ದಾರೆ.
ಐಐಟಿ ಪದವೀಧರನಾದ ಮುರ್ತಾಜಾ ಅಬ್ಬಾಸಿ ಎಂಬುವವ ಉತ್ತರಪ್ರದೇಶದ ಗೋರಖ್‌ಪುರದಲ್ಲಿರುವ ಗೋರಖನಾಥ ದೇವಸ್ಥಾನಕ್ಕೆ ಹರಿತವಾದ ಆಯುಧದಿಂದ ಪ್ರವೇಶಿಸಲು ಯತ್ನಿಸಿದ್ದ. ಈ ವೇಳೆ, ಭದ್ರತೆಗಿದ್ದ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಇದರಿಂದ ಕುಪಿತಗೊಂಡ ಆ ವ್ಯಕ್ತಿ ಸಿಬ್ಬಂದಿಯ ಮೇಲೆ ದಾಳಿ ಮಾಡಿ ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಶಂಕೆಯನ್ನು ಗೃಹ ಸಚಿವಾಲಯ ವ್ಯಕ್ತಪಡಿಸಿದೆ.
ಓದಿ: ಪ್ರಧಾನಿಗೆ ನೇತಾಜಿ ಪ್ರತಿಮೆ ಉಡುಗೊರೆ ಕೊಟ್ಟ ಮೈಸೂರಿನ ಅರುಣ್: ಇಂಡಿಯಾ ಗೇಟ್ ಬಳಿ ಬೋಸ್ ವಿಗ್ರಹ ನಿರ್ಮಿಸುವ ಹೊಣೆ