ಬರೇಲಿ (ಯುಪಿ): ಇಲ್ಲಿನ ಬರದಾರಿ ನಿವಾಸಿ ಗೌರವ ಗುಪ್ತಾ ಹಾಗೂ ಫಿಲಿಫೈನ್ಸ್ ಗೆಳತಿ ಮಾರಿಯಾ ನಡುವೆ ಪ್ರೇಮಾಂಕುರವಾಗಿದೆ. ನಂತರ ಇಬ್ಬರು ಕುಟುಂಬದವರ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದಾರೆ. ಆದರೆ, ಇದೀಗ ದಂಪತಿ ತಮ್ಮ ಮದುವೆಗೆ ಕಾನೂನು ರೂಪವನ್ನು ನೀಡಲು ಅಧಿಕಾರಿಗಳ ಕಚೇರಿಗಳನ್ನು ಸುತ್ತುತ್ತಿದ್ದಾರೆ.
ದುರಾದೃಷ್ಟವಶಾತ್ ಅವರ ಮದುವೆ ನೋಂದಣಿಯಾಗುತ್ತಿಲ್ಲ. ಪತ್ನಿ ಮಾರಿಯಾ ಅವರ ವೀಸಾ ಕೂಡ ಸೆಪ್ಟೆಂಬರ್ 16ರಂದು ಮುಕ್ತಾಯವಾಗುತ್ತದೆ. ಆದ್ದರಿಂದ, ಮದುವೆಯನ್ನು ನೋಂದಾಯಿಸದಿದ್ದರೆ ಮಾರಿಯಾ ಫಿಲಿಪೈನ್ಸ್‌ಗೆ ಹಿಂತಿರುಗಬೇಕಾಗುತ್ತದೆ.
ಪ್ರೀತಿ ಬೆಳೆದಿದ್ದು ಹೇಗೆ? : ಬರೇಲಿಯ ಬರದಾರಿ ಪೊಲೀಸ್ ಠಾಣೆ ನಿವಾಸಿ ಗೌರವ್ ಗುಪ್ತಾ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಂಪನಿಯ ಕೆಲಸಕ್ಕೆ ಸಂಬಂಧಿಸಿದಂತೆ ಅವರು ಫಿಲಿಪೈನ್ಸ್‌ಗೆ ಹೋಗಿದ್ದರು.
ಅಲ್ಲಿ ಅವರು ಮಾರಿಯಾಳನ್ನು ಭೇಟಿಯಾಗಿದ್ದಾರೆ. ಕೆಲವು ದಿನಗಳ ನಂತರ, ಮಾರಿಯಾ ತನ್ನ ಕಂಪನಿಯ ಕೆಲಸಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬಂದಿದ್ದಾಳೆ. ನಂತರ ಇಲ್ಲಿ ಅವಳು ಮತ್ತೊಮ್ಮೆ ಗೌರವ್ ಗುಪ್ತಾರನ್ನು ಭೇಟಿಯಾಗಿದ್ದಾಳೆ.
ಇಬ್ಬರ ಭೇಟಿ ಬಳಿಕ ಪರಿಚಯ ಪ್ರೀತಿಗೆ ತಿರುಗಿದೆ. ಮತ್ತೆ ಮಾರಿಯಾ ತನ್ನ ಪ್ರೇಮಿ ಗೌರವ್ ಗುಪ್ತಾರನ್ನು ಮದುವೆಯಾಗಲು ಉತ್ತರಪ್ರದೇಶದ ಬರೇಲಿಯನ್ನು ತಲುಪಿದ್ದಾರೆ. ಅಲ್ಲಿ 24 ನವೆಂಬರ್ 2019ರಂದು ಗೌರವ್ ಗುಪ್ತಾ ಮತ್ತು ಮಾರಿಯಾ ಹಿಂದೂ ಸಂಪ್ರದಾಯದ ಪ್ರಕಾರ ಬರೇಲಿಯ ಹೋಟೆಲ್‌ವೊಂದರಲ್ಲಿ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದಾರೆ.
ಸಾಮಾಜಿಕವಾಗಿ ಇಬ್ಬರೂ ಗಂಡ ಮತ್ತು ಹೆಂಡತಿಯಾಗಿ ಬದುಕಲು ಆರಂಭಿಸಿದ್ದಾರೆ. ಮಾರಿಯಾ ಅವರ ವೀಸಾ ಅಲ್ಪಾವಧಿಯಾಗಿತ್ತು. ಮದುವೆಯನ್ನು ನೋಂದಾಯಿಸದ ಕಾರಣ ಆಕೆ ತನ್ನ ಪತಿ ಗೌರವ್ ಅವರನ್ನು ಬಿಟ್ಟು ತನ್ನ ದೇಶ ಫಿಲಿಪೈನ್ಸ್‌ಗೆ ಮರಳಬೇಕಾಯಿತು.
ಮಾರಿಯಾ ಫಿಲಿಪೈನ್ಸ್‌ಗೆ ಮರಳಿದ ಕೆಲವು ತಿಂಗಳುಗಳ ನಂತರ ಜಾಗತಿಕವಾಗಿ ಸಾಂಕ್ರಾಮಿಕ ಕೊರೊನಾ ಸೋಂಕು ಉಲ್ಬಣವಾಗಿದೆ. ಹೀಗಾಗಿ, ಸುಮಾರು ಎರಡೂವರೆ ವರ್ಷಗಳ ಕಾಲ ಗಂಡ ಮತ್ತು ಹೆಂಡತಿ ಇಬ್ಬರೂ ಬೇರೆ ಬೇರೆ ದೇಶಗಳಲ್ಲಿ ವಾಸಿಸಿದ್ದಾರೆ. ಇದರಿಂದಾಗಿ ಅವರಿಗೆ ಭೇಟಿಯಾಗಲು ಸಾಧ್ಯವಾಗಿಲ್ಲ.
ಈಗ ಕೊರೊನಾ ಅಲೆ ಕಡಿಮೆಯಾಗಿದೆ. ಹೀಗಾಗಿ, ಮಾರಿಯಾ 3 ತಿಂಗಳ ವೀಸಾದಲ್ಲಿ ಫಿಲಿಪೈನ್ಸ್‌ನಿಂದ ಬರೇಲಿಗೆ ಬಂದಿದ್ದಾರೆ. ಈಗ ಗಂಡ ಮತ್ತು ಹೆಂಡತಿ ಇಬ್ಬರೂ 1 ತಿಂಗಳಿನಿಂದ ಮದುವೆಯ ನೋಂದಣಿಗಾಗಿ ಅಧಿಕಾರಿಗಳ ಕಚೇರಿಗಳನ್ನು ಸುತ್ತುತ್ತಿದ್ದಾರೆ.
ಸಾಕಷ್ಟು ಸುತ್ತಾಡಿದ ನಂತರವೂ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಲ್ಲ ಎಂದು ಗೌರವ್ ಬೇಸರ ವ್ಯಕ್ತಪಡಿಸ್ತಿದಾರೆ. ಈಗ ಅವರ ಪತ್ನಿ ಮಾರಿಯಾ ಅವರ ವೀಸಾ ಸೆಪ್ಟೆಂಬರ್ 16ಕ್ಕೆ ಮುಗಿಯಲಿದೆ.