ಲೇಹ್ (ಲಡಾಖ್): ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 2023ರಲ್ಲಿ ಜಾಗತಿಕ ಜಿ-20 ಸಮಾವೇಶ ನಡೆಸುವ ಪ್ರಸ್ತಾವನೆಯ ನಂತರ ಈಗ ಭಾರತ, ಲಡಾಖ್ನಲ್ಲಿಯೂ ಜಿ-20 ಸಮಾವೇಶದ ಕೆಲ ಸಭೆಗಳನ್ನು ನಡೆಸುವ ಅಥವಾ ಲಡಾಖ್ಗೆ ವಿಶ್ವದ ಕೆಲ ಪ್ರಮುಖ ನಾಯಕರನ್ನು ಕರೆದುಕೊಂಡು ಹೋಗುವ ಇಂಗಿತ ವ್ಯಕ್ತಪಡಿಸಿದೆ.
ಲಡಾಖ್ನಲ್ಲಿ ಸಭೆ ನಡೆಸುವ ಅಥವಾ ವಿಶ್ವ ನಾಯಕರನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಭಾರತದ ಪ್ರಯತ್ನಗಳು ಚೀನಾಗೆ ತಿರುಗೇಟು ನೀಡುವ ಉದ್ದೇಶ ಹೊಂದಿವೆ ಎಂದು ಹೇಳಲಾಗಿದೆ. ಲಡಾಖ್ ವಲಯದಲ್ಲಿ ಯಾವಾಗಲೂ ಕಾಲುಕೆರೆದು ಜಗಳವಾಡುವ ಚೀನಾಕ್ಕೆ, ಲಡಾಖ್ ನಮ್ಮದೇ ಎಂಬ ಪ್ರಬಲ ಸಂದೇಶ ರವಾನಿಸಲು ಭಾರತ ಸಜ್ಜಾಗಿದೆ.
ಲಡಾಖ್ನಲ್ಲಿ ಜಿ-20 ಸಭೆ ಆಯೋಜಿಸುವ ಬಗೆಗಿನ ಕಾರ್ಯ ಕಲಾಪಗಳನ್ನು ನೋಡಿಕೊಳ್ಳುವ ಸಲುವಾಗಿಯೇ ಲಡಾಖ್ ಕೇಂದ್ರಾಡಳಿತ ಪ್ರದೇಶವು ಇಬ್ಬರು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರದ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಗವರ್ನರ್ ಆರ್ ಕೆ ಮಾಥುವಾ ನೇತೃತ್ವದ ಲಡಾಖ್ ಕೇಂದ್ರಾಡಳಿತವು ವಿದೇಶಾಂಗ ಸಚಿವಾಲಯದ ಜೊತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಜಿ-20 ಸಭೆಗಳ ದೃಷ್ಟಿಯಿಂದ ನೋಡಲ್ ಅಧಿಕಾರಿಗಳಾಗಿ ನಾಮನಿರ್ದೇಶನ ಮಾಡಲು ಅನುಮತಿ ನೀಡಿದೆ.
ಭಾರತವು ಈ ವರ್ಷದ ಡಿಸೆಂಬರ್ 1 ರಂದು ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. 2023ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ-20 ರಾಷ್ಟ್ರಗಳ ನಾಯಕರ ಸಮಾವೇಶದ ಉದ್ಘಾಟನಾ ಸಮಾರಂಭ ಏರ್ಪಡಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತವು ಜೂನ್ 23 ರಂದು 5 ಜನರ ಸಮಿತಿಯನ್ನು ನೇಮಿಸಿದೆ.
ಜಿ-20 ಸಮಾವೇಶದ ಕೆಲ ಸಭೆಗಳನ್ನು ಲಡಾಖ್ನಲ್ಲಿ ನಡೆಸುವುದು ಅಥವಾ ಕೆಲ ಆಯ್ದ ವಿಶ್ವನಾಯಕರನ್ನು ಲಡಾಖ್ಗೆ ಕರೆದುಕೊಂಡು ಹೋಗಲು ಭಾರತ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.
ಇದನ್ನು ಓದಿ:ಆಟೋರಿಕ್ಷಾ ಮರ್ಸಿಡಿಸ್ ಕಾರನ್ನು ಮೀರಿಸಿದೆ: ಉದ್ಧವ್ ಠಾಕ್ರೆಗೆ ಸಿಎಂ ಶಿಂದೆ ತಿರುಗೇಟು