ವಿದಿಶಾ (ಮಧ್ಯಪ್ರದೇಶ) : ಕುರ್ವಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ಖೇಡಾ ಗ್ರಾಮದ ಮಹಿಳೆ ಪೂಜಾ ಎಂಬುವಳು 8 ವರ್ಷದ ಹಿಂದೆ ಭೋಪಾಲ್‌ನಿಂದ ಕಾಣೆಯಾಗಿದ್ದಳು. ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡು 8 ವರ್ಷಗಳವರೆಗೆ ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಜೀವನ ಮಾಡುತ್ತಿದ್ದಳು. ಆದರೆ, ಕೊನೆಗೂ ಆ ಟ್ರಸ್ಟ್ನವರ ಮಾನವೀಯ ಕಾರ್ಯದಿಂದ ಮಹಿಳೆ ತಮ್ಮ ಕುಟುಂಬ ಸೇರಿದ್ದಾಳೆ.
ಕೇರಳದ ದಿವ್ಯ ಕರುಣನೀಯ ಚಾರಿಟೇಬಲ್ ಟ್ರಸ್ಟ್ ಈ ಕೆಲಸ ಮಾಡಿದೆ. ಮಹಿಳೆ ಕಳೆದ ಎಂಟು ವರ್ಷಗಳಿಂದ ಟ್ರಸ್ಟ್‌ನಲ್ಲಿದ್ದರು. ವಾಸ್ತವವಾಗಿ ಈ ಮಹಿಳೆಗೆ 8 ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿಂದಲೂ ಆಕೆಗೆ ಯಾವುದೇ ನೆನಪಿನ ಶಕ್ತಿ ಇರಲಿಲ್ಲ.
ಆದರೆ, ಈಗ ಆಕೆಗೆ ನೆನಪಿನ ಶಕ್ತಿ ಬಂದಿದೆ. ಆಕೆ ತನ್ನನ್ನು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಕುರ್ವಾಯಿ ತಹಸಿಲ್‌ನಲ್ಲಿರುವ ಲೈರಾದ ಬಾರ್ಖೇಡಾ ಹಳ್ಳಿಯ ನಿವಾಸಿ ಎಂದು ಗುರುತಿಸಿಕೊಂಡಿದ್ದಾಳೆ.
ಇನ್ನು, ಈ ಮಹಿಳೆ ಹೇಳಿಕೆ ಮೇರೆಗೆ ಟ್ರಸ್ಟ್‌ನವರು ಆಕೆ ಹೇಳಿದ ಸ್ಥಳಕ್ಕೆ ಕರೆದೊಯ್ದಾಗ ಆಕೆಯನ್ನು ಆಕೆಯ ಕುಟುಂಬಸ್ಥರು ಗುರುತು ಹಿಡಿದಿದ್ದಾರೆ. ಟ್ರಸ್ಟ್‌ನ ಮಹಿಳೆಯರು ಬುಡಕಟ್ಟು ಮಹಿಳೆಯನ್ನು ಪೊಲೀಸರ ಮುಂದೆ ಅವರ ಕುಟುಂಬಕ್ಕೆ ಒಪ್ಪಿಸಿದ್ದಾರೆ.
ಈ ವೇಳೆ ಆಕೆ ತನ್ನ ದುಃಖವನ್ನು ವ್ಯಕ್ತಪಡಿಸಿದ್ದಾಳೆ. ತಾನು ಮನೆಯಿಂದ ಹೊರಟಾಗ ಮಕ್ಕಳು ತುಂಬಾ ಚಿಕ್ಕವರಿದ್ದರು. ನನ್ನ ಪತಿ ಪ್ರತಿದಿನ ನನ್ನನ್ನು ನಿಂದಿಸುತ್ತಿದ್ದರು. ನಿಂದನೆಯಿಂದ ಮನನೊಂದು ಮನೆ ತೊರೆದೆ ಎಂದು ಹೇಳಿದ್ದಾಳೆ.
ಮಹಿಳೆಯನ್ನು ತನ್ನ ಕುಟುಂಬದಲ್ಲಿ ಯಾರನ್ನಾದರೂ ಗುರುತಿಸುತ್ತೀರಾ ಎಂದು ಕೇಳಿದಾಗ, ಆಕೆ ಸ್ಥಳದಲ್ಲಿದ್ದ ತನ್ನ ಸೋದರ ಮಾವನನ್ನು ಗುರುತಿಸಿದ್ದಾಳೆ. ಹಾಗೆ ಯಾರಾದರೂ ಮುಂದೆ ಬಂದರೆ ನಾನು ಅವರನ್ನು ಗುರುತಿಸುತ್ತೇನೆ ಎಂದು ಹೇಳಿದ್ದಾಳೆ.
2013ರಲ್ಲಿ ಈಕೆಯ ಮಾನಸಿಕ ಸಮತೋಲನ ಸರಿಯಾಗಿರಲಿಲ್ಲ. ಭೋಪಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ರೈಲಿನಲ್ಲಿ ಕುಳಿತು ಕೇರಳವನ್ನು ತಲುಪಿದ್ದಾಳೆ. ಆಕೆಯನ್ನು ಅಲ್ಲಿ ಕೇರಳ ಪೊಲೀಸರು ಟ್ರಸ್ಟ್‌ಗೆ ಒಪ್ಪಿಸಿದ್ದರು. ನಂತರ ಟ್ರಸ್ಟ್‌ನವರು ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ.