ನವದೆಹಲಿ: ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಜೋರಾಗಿದ್ದು, ನಿತ್ಯ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಅನೇಕರು ಪೋಷಕರನ್ನ ಕಳೆದುಕೊಂಡು ಅನಾಥರಾಗುತ್ತಿರುವ ಘಟನೆ ಸಹ ನಡೆಯುತ್ತಿವೆ.
ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ದೆಹಲಿ ಹಾಗೂ ಉತ್ತರ ಪ್ರದೇಶ ಎರಡೂ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಇದರ ಮಧ್ಯೆ ಹೃದಯಸ್ಪರ್ಶಿ ಘಟನೆವೊಂದು ನಡೆದಿದೆ. ತಂದೆ - ತಾಯಿ ಇಬ್ಬರಿಗೂ ಕೊರೊನಾ ಸೋಂಕು ದೃಢಗೊಂಡಿದ್ದು, ಈ ವೇಳೆ ಆರು ತಿಂಗಳ ಮಗುವಿನ ರಕ್ಷಣೆಯನ್ನ ದೆಹಲಿ ಪೊಲೀಸರು ಹೊತ್ತು ಕೊಂಡಿದ್ದಾರೆ.
ದೆಹಲಿ ಜೆಟಿಬಿ ನಗರದ ರೇಡಿಯೋ ಕಾಲೋನಿಯಲ್ಲಿ ವಾಸವಾಗಿದ್ದ ದಂಪತಿಗಳಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಅವರ ಆರು ತಿಂಗಳ ಮಗುವಿಗೆ ಸೋಂಕು ನೆಗೆಟಿವ್ ಬಂದಿದೆ. ಈ ವೇಳೆ, ಆ ಮಗುವಿನ ಯೋಗಕ್ಷೇಮ ನೋಡಿಕೊಳ್ಳುವವರು ಯಾರು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರ ಸಂಬಂಧಿಕರು ಬೇರೆ ರಾಜ್ಯಗಳಲ್ಲಿ ವಾಸವಾಗಿದ್ದರಿಂದ ದೆಹಲಿಗೆ ಬರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಅಪಘಾತ: ಸ್ಥಳದಲ್ಲೇ ಸಾವನ್ನಪ್ಪಿದ ಖಾಸಗಿ ಆಸ್ಪತ್ರೆ ನರ್ಸ್
ಈ ವೇಳೆ ಮೀರತ್ನಲ್ಲಿರುವ ಸಂಬಂಧಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರಾಖಿ ಅವರನ್ನ ಸಂಪರ್ಕಿಸಿ, ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ರಾಖಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ಮಗುವನ್ನ ತಮ್ಮ ವಶಕ್ಕೆ ಪಡೆದುಕೊಳ್ಳುವಂತೆ ಅನುಮತಿ ನೀಡುತ್ತಿದ್ದಂತೆ ಪೊಲೀಸ್ ಕಾನ್ಸ್ಟೇಬಲ್ ಅವರ ಮನೆಗೆ ತೆರಳಿ ಮಗು ಹಾಗೂ ಅದಕ್ಕೆ ಬೇಕಾದ ಅಗತ್ಯ ವಸ್ತು ಪಡೆದುಕೊಂಡಿದ್ದಾರೆ. ಜತೆಗೆ ಮಗುವನ್ನ ಸುರಕ್ಷಿತವಾಗಿ ಉತ್ತರ ಪ್ರದೇಶದ ಅವರ ಅಜ್ಜಿ ಮನೆಗೆ ಬಿಟ್ಟು ಬಂದಿದ್ದಾರೆ.