ಘಾಜಿಯಾಬಾದ್ / ನವದೆಹಲಿ: ಕಪ್ಪು ಮತ್ತು ಬಿಳಿ ಶಿಲೀಂಧ್ರ ಪ್ರಕರಣಗಳು ಹೊರಬಂದ ನಂತರ, ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ (ಯೆಲ್ಲೊ ಫಂಗಸ್) ಪ್ರಕರಣ ವರದಿಯಾಗಿದೆ.
ಹಳದಿ ಶಿಲೀಂಧ್ರವು ನಗರದಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ ಎಂದು ಪ್ರೊಫೆಸರ್ ಡಾ.ಬಿ.ಪಿ ತ್ಯಾಗಿ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಜಯ್ ನಗರದ ನಿವಾಸಿ 45 ವರ್ಷ ವಯಸ್ಸಿನ ರೋಗಿಯು ಈ ಹಿಂದೆ ಕಪ್ಪು ಮತ್ತು ಬಿಳಿ ಶಿಲೀಂಧ್ರಕ್ಕೆ ತುತ್ತಾಗಿದ್ದು. ಈಗ ಅವರಲ್ಲಿ ಯೆಲ್ಲೊ ಫಂಗಸ್ ಕಾಣಿಸಿಕೊಂಡಿದೆ.
'ಮುಕೋರ್ ಸೆಪ್ಟಿಕಸ್' (ಹಳದಿ ಶಿಲೀಂಧ್ರ) ರೋಗ ಲಕ್ಷಣಗಳಿಂದ ಸೋಂಕಿತ ಜನರು ಆಲಸ್ಯ, ಕಡಿಮೆ ಹಸಿವು ಅಥವಾ ಹಸಿವು ಆಗದಿರುವುದು, ತೂಕ ಇಳಿಕೆ, ಕೀವು ಸೋರಿಕೆಯಂತಹ ಇತರೆ ರೋಗಲಕ್ಷಣಗಳನ್ನು ಎದುರಿಸಬೇಕಾಗುತ್ತದೆ. ಅಪೌಷ್ಟಿಕತೆಯಿಂದಾಗಿ ಗಾಯಗಳು ಮತ್ತು ಕಣ್ಣುಗಳನ್ನು ನಿಧಾನವಾಗಿ ಗುಣಪಡಿಸುವುದು ಸವಾಲಿನದ್ದು ಎನ್ನುತ್ತಾರೆ ಇಎನ್‌ಟಿ ತಜ್ಞ ಪ್ರೊಫೆಸರ್ ಡಾ. ಬಿ.ಪಿ. ತ್ಯಾಗಿ.
ಸೋಂಕು ತೀವ್ರವಾಗುತ್ತಿದ್ದಂತೆ ಇದು ಅಂಗಾಂಗ ವೈಫಲ್ಯ ಮತ್ತು ನೆಕ್ರೋಸಿಸ್ಗೆ ಕಾರಣವಾಗುತ್ತದೆ. ಹಳದಿ ಶಿಲೀಂಧ್ರವು ಮಾರಣಾಂತಿಕ ಕಾಯಿಲೆಯಾಗಿದೆ. ಸೋಂಕು ಆಂತರಿಕವಾಗಿ ಬೆಳೆಯುತ್ತದೆ ಮತ್ತು ಆದ್ದರಿಂದ ರೋಗಲಕ್ಷಣಗಳನ್ನು ಗಮನಿಸುವುದು ಮುಖ್ಯವಾಗಿದೆ. 'ಆಂಫೊಟೆರಿಸಿನ್ ಬಿ' ಚುಚ್ಚುಮದ್ದು ಮಾತ್ರ ಇದಕ್ಕೆ ಪರಿಹಾರವಾಗಿದೆ ಎಂದರು.
ಅಶುಚಿತ್ವವು ಹಳದಿ ಶಿಲೀಂಧ್ರಕ್ಕೆ ಪ್ರಮುಖ ಕಾರಣವಾಗಿದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಗಟ್ಟಲು ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ಮನೆಯನ್ನು ಅಚ್ಚುಕಟ್ಟಾಗಿ ಇಡುವುದು ಬಹಳ ಮುಖ್ಯ. ಆರ್ದ್ರತೆಯು ಸಹ ಒಂದು ಪ್ರಮುಖ ಅಂಶವಾಗಿದೆ. ಗಾಳಿಯಲ್ಲಿರುವ ನೀರಿನ ಆವಿಯ ಹೆಚ್ಚಿನ ಸಾಂದ್ರತೆಯು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ, ಜಿಲ್ಲೆಯಲ್ಲಿ ಹಳದಿ ಶಿಲೀಂಧ್ರ ಪ್ರಕರಣದ ಬಗ್ಗೆ ಯಾವುದೇ ವರದಿ ಇಲ್ಲ ಎಂದು ಗಾಜಿಯಾಬಾದ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಎನ್.ಕೆ.ಗುಪ್ತಾ ಹೇಳಿದ್ದಾರೆ.