ಬಾರಾಬಂಕಿ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 28 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಎಮ್ಮೆಯೊಂದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 83 ವರ್ಷದ ವ್ಯಕ್ತಿಯ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಎಮ್ಮೆ ಸಾವಿಗೆ ಸಂಬಂಧಿಸಿದಂತೆ ಬರೇಲಿ ನ್ಯಾಯಾಲವು 83 ವರ್ಷದ ಅಚ್ಚನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನಿಗೆ ಹಲವು ವರ್ಷಗಳ ಹಿಂದೆ ಕೋರ್ಟ್ ಜಾಮೀನು ನೀಡಿತ್ತು. ಆದರೆ, ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ್ದ ಕಾರಣ ಅಧಿಕಾರಿಗಳು ಇತ್ತೀಚೆಗೆ ವಾರಂಟ್ ನೀಡಿದ್ದಾರೆ. ಅರೆಸ್ಟ್ ವಾರಂಟ್ ವಿಚಾರ ತಿಳಿದ ತಕ್ಷಣ ಪೊಲೀಸರ ಮುಂದೆ ವೃದ್ಧ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಈ ಘಟನೆಯು 1995 ರ ಹಿಂದಿನದು, ಮುನವ್ವರ್ ಅವರ ಮಗ ಅಚ್ಚನ್ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಾರಾಬಂಕಿ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ನಡೆದ ಪ್ರಸಂಗ. ಸದ್ಯಕ್ಕೆ ವೃದ್ಧ ಅಚ್ಚನ್, ಬಾರಾಬಂಕಿಯ ದಯಾನಂದ ಟೆಲಿಫೋನ್ ಎಕ್ಸ್ಚೇಂಜ್ ಹಿಂಭಾಗ ವಾಸಿಸುತ್ತಿದ್ದಾರೆ. ಇವರು ಈ ಹಿಂದೆ ಕೈಸರ್‌ಬಾಗ್ ಡಿಪೋದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸಿದ್ದಾರೆ. ಚಾರ್ಬಾಗ್ ಮತ್ತು ಬಾರಾಬಂಕಿ ಡಿಪೋಗಳಲ್ಲಿ ಸಹ ಕೆಲಸ ಮಾಡಿದ್ದು, 1994ರಲ್ಲಿ ಕೈಸರ್‌ಬಾಗ್‌ನಿಂದ ಬರೇಲಿಗೆ ಹೋಗುತ್ತಿದ್ದಾಗ ಅಚ್ಚನ್ ಅವರೇ ಬಸ್ ಓಡಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ದಿಢೀರನೇ ಎಮ್ಮೆಯೊಂದು ಬಸ್ಸಿನ ಮುಂದೆ ಬಂದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸಾವನ್ನಪ್ಪಿತ್ತು.
ಈ ಕುರಿತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279, 337 ಮತ್ತು 338 ರ ಅಡಿಯಲ್ಲಿ ಫರೀದ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಜಾಮೀನು ಪಡೆದುಕೊಂಡ ಅಚ್ಚನ್, ಬಳಿಕ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಇದಾದ ನಂತರ ಕೈಸರ್‌ಬಾಗ್, ಚಾರ್‌ಬಾಗ್ ಮತ್ತು ಬಾರಾಬಂಕಿ ಡಿಪೋಗಳಿಗೆ ಬಸ್ ಡ್ರೈವರ್ ಆಗಿ ಕೆಲಸ ಮಾಡಿ, ಸರಿಸುಮಾರು 20 ವರ್ಷಗಳ ಹಿಂದೆ ನಿವೃತ್ತರಾದರು.
ಇದನ್ನೂ ಓದಿ : ಚೆಕ್ ಬೌನ್ಸ್ ಪ್ರಕರಣ : ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರಂಟ್
ಸೋಮವಾರ ಫರೀದ್‌ಪುರ ಠಾಣೆಯ ಎಸ್‌ಐ ವಿಜಯ್ ಪಾಲ್ ಬಂದು ಅರೆಸ್ಟ್ ವಾರಂಟ್ ತೋರಿಸಿದಾಗ ಅಚ್ಚರಿ ಆಯ್ತು. ನನಗೆ ಪಾರ್ಶ್ವವಾಯು ಮತ್ತು ಅನಾರೋಗ್ಯ ಇರುವ ಕಾರಣ ನಡೆಯಲು ಆಗುವುದಿಲ್ಲ ಎಂದು ವೃದ್ಧ ಅಳಲು ತೋಡಿಕೊಂಡಿದ್ದಾರೆ. ಇನ್ನೊಂದೆಡೆ, ಫರೀದ್‌ಪುರ ಬರೇಲಿಯ ನ್ಯಾಯಾಲಯವು ವಾರಂಟ್ ಅನ್ನು ನಿಜವಾಗಿಯೂ ಜಾರಿಗೊಳಿಸಿದೆ ಎಂದು ಬರೇಲಿಯ ಫರೀದ್‌ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಜಯ್ ಪಾಲ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಜುಲೈ 17 ರಂದು ನಿಗದಿಪಡಿಸಲಾದ ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ : ಉಮೇಶ್ ಪಾಲ್ ಹತ್ಯೆ ಪ್ರಕರಣ : ಆರೋಪಿ ಗುಡ್ಡು ಮುಸ್ಲಿಂ ಮನೆ ಧ್ವಂಸಗೊಳಿಸಲು ಪೊಲೀಸರಿಂದ ಸಿದ್ಧತೆ