ನವದೆಹಲಿ: ಶ್ರದ್ಧಾ ವಾಕರ್ ಅನ್ನು 'ತನ್ನ ಕೈಯಿಂದಲೇ ಕತ್ತು ಹಿಸುಕಿ' ಕೊಲೆ ಮಾಡಿರುವುದಾಗಿ ಆಫ್ತಾಬ್ ಅಮೀನ್ ಪೂನಾವಾಲಾ ಶ್ರದ್ಧಾ ವಾಕರ್ ತಂದೆಗೆ ಬಹಿರಂಗಪಡಿಸಿದ್ದ ಎಂದು ಸಂತ್ರಸ್ತೆಯ ತಂದೆ ಸೋಮವಾರ ದೆಹಲಿ ಹೈಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ. ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಹೇಳಿಕೆಗಳನ್ನು ದೆಹಲಿ ನ್ಯಾಯಾಲಯ ದಾಖಲಿಸಿಕೊಳ್ಳುತ್ತಿದ್ದು, ಈ ಸಂದರ್ಭ ಸಂತ್ರಸ್ತೆಯ ತಂದೆ ಈ ಮಾತನ್ನು ಹೇಳಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಮನಿಶಾ ಖುರಾನಾ ಕಕ್ಕರ್ ಅವರ ಮುಂದೆ, ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ವಿಕಾಸ್ ಮದನ್ ವಾಲ್ಕರ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆ ನಡೆಸಿದರು. ಈ ವೇಳೆ, ಶ್ರದ್ಧಾ ವಾಕರ್ ಅನ್ನು ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಗರಗಸ ಖರೀದಿಸಿ, ಆಕೆಯ ಮಣಿಕಟ್ಟುಗಳನ್ನು ಕತ್ತರಿಸಿ ಕಸದ ಚೀಲದಲ್ಲಿ ಹಾಕಿ ಪ್ಯಾಕ್ ಮಾಡಿದ್ದಾಗಿ ಪೂನಾವಾಲಾ ಹೇಳಿಕೆಗೆ ಶ್ರದ್ಧಾ ಅವರ ತಂದೆ ಸಾಕ್ಷಿ ಹೇಳಿದ್ದಾರೆ.
"ತಾವು ನವೆಂಬರ್ 11, 2022 ರಂದು ಮೆಹ್ರೌಲಿ ಪೊಲೀಸ್ ಠಾಣೆಗೆ ಹೋಗಿದ್ದು, ಅಲ್ಲಿ ತಮ್ಮ ಬಳಿ ಆರೋಪಿ ಪೂನಾವಾಲಾ ಅವರನ್ನು ಗುರುತಿಸಿದ್ದಾರೆಯೇ ಎಂದು ಪೊಲೀಸ್ ಅಧಿಕಾರಿಗಳು ಕೇಳಿದರು. ನಾನು ಸಕಾರಾತ್ಮಕವಾಗಿ ಉತ್ತರಿಸಿದ್ದು, ಕಳೆದ ಮೂರು ವರ್ಷಗಳಿಂದ ನನ್ನ ಮಗಳೊಂದಿಗೆ ಪೂನಾವಾಲಾ ವಾಸಿಸುತ್ತಿದ್ದ ಎಂದು ಹೇಳಿದ್ದೇನೆ. ಆತ ನನ್ನ ಮಗಳೊಂದಿಗೆ ಜಗಳವಾಡಿದ್ದು ಮಾತ್ರವಲ್ಲದೆ ಹಲವಾರು ಸಂದರ್ಭಗಳಲ್ಲಿ ಥಳಿಸಿದ್ದಾನೆ ಕೂಡ ಎಂದು ನಾನು ಪೊಲೀಸರಿಗೆ ತಿಳಿಸಿದ್ದೇನೆ" ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ, ಕೊಲೆಯಾದ ಎರಡು ದಿನಗಳ ನಂತರ ಅಂದರೆ ಮೇ 20 ರಂದು ಶ್ರದ್ಧಾ ಖಾತೆಯಿಂದ ಒಂದಷ್ಟು ಮೊತ್ತದ ಹಣ ವರ್ಗಾವಣೆ ಆಗಿರುವ ಬಗ್ಗೆ ಬಗ್ಗೆ ಅಧಿಕಾರಿಗಳು ಪೂನಾವಾಲಾನನ್ನು ವಿಚಾರಣೆ ನಡೆಸುತ್ತಿರುವುದನ್ನು ನೋಡಿದ್ದೆ. ಗೊಂದಲಕ್ಕೊಳಗಾಗಿದ್ದ ಪೂನಾವಾಲಾ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದ.
"ನನ್ನ ಮಗಳು ಎಲ್ಲಿದ್ದಾಳೆ ಎಂದು ಪೂನಾವಾಲಾ ಅವರನ್ನು ನಾನು ವಿಚಾರಿಸಿದಾಗ, ಅವಳು ಇನ್ನಿಲ್ಲ ಎಂದು ಹೇಳಿದ್ದನು. ಅದನ್ನು ಕೇಳಿ ನಾನು ಆಘಾತಕ್ಕೊಳಗಾಗಿ, ತಲೆ ತಿರುಗಲು ಪ್ರಾರಂಭಿಸಿತ್ತು. ಸ್ವಲ್ಪ ಸಮಯದಲ್ಲಿ ನಾನು ಚೇತರಿಸಿಕೊಂಡ ನಂತರ, ಪೂನಾವಾಲ ನನ್ನ ಮಗಳನ್ನು ಹೇಗೆ ಕೊಂದ ಎಂಬುದನ್ನು ಹೇಳಲು ಪ್ರಾರಂಭಿಸಿದ್ದನು. ಮೇ 18, 2022 ರಂದು ಛತ್ತರ್ಪುರ ನಿವಾಸದಲ್ಲಿ ನನ್ನ ಮಗಳೊಂದಿಗೆ ಜಗಳವಾಡಿದ್ದು, ಆತ ತನ್ನ ಕೈಯಿಂದಲೇ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ" ಎಂದು ವಿಕಾಸ್ ವಾಕರ್ ಹೇಳಿದರು.
"ಶ್ರದ್ಧಾಳನ್ನು ಕೊಂದ ನಂತರ ಹಾರ್ಡ್‌ವೇರ್ ಅಂಗಡಿಯಿಂದ ಗರಗಸ, ಎರಡು ಹೆಚ್ಚುವರಿ ಬ್ಲೇಡ್‌ಗಳು, ಸುತ್ತಿಗೆ ಇತ್ಯಾದಿಗಳನ್ನು ಖರೀದಿಸಿ ರಾತ್ರಿಯಲ್ಲೇ ಆಕೆಯ ಎರಡೂ ಮಣಿಕಟ್ಟುಗಳನ್ನು ಕತ್ತರಿಸಿ, ಅವುಗಳನ್ನು ಪಾಲಿಥಿನ್ ಕಸದ ಬ್ಯಾಗ್ಗಳಲ್ಲಿ ಹಾಕಿದ್ದೇನೆ ಎಂದು ಪೂನಾವಾಲಾ ತನಗೆ ಹೇಳಿದ್ದಾನೆ" ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. 2020 ಜನವರಿಯಲ್ಲಿ ಶ್ರದ್ಧಾ ಆರೋಪಿಯನ್ನು ಮುಂಬೈನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಬಂದಾಗ ಮೊದಲ ಬಾರಿಗೆ ಆಫ್ತಾಬ್ನನ್ನು ಭೇಟಿಯಾಗಿರುವುದಾಗಿ ವಾಕರ್ ನ್ಯಾಯಾಲಯಕ್ಕೆ ತಿಳಿಸಿದರು.
"ಲಿವ್-ಇನ್ ರಿಲೇಶನ್ಶಿಪ್ ಆಯ್ಕೆ ಮಾಡಿಕೊಂಡು ಆಫ್ತಾಬ್ ಜೊತೆ ಶ್ರದ್ಧಾ ತೆರಳುವ ನಿರ್ಧಾರವನ್ನು ನಾವು ವಿರೋಧಿಸಿದಾಗ, ಶ್ರದ್ಧಾ ತಾನು 25 ವರ್ಷ ವಯಸ್ಸಿನ ಮಹಿಳೆಯಾಗಿರುವುದರಿಂದ, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮನೆಯಿಂದ ಹೋಗಿದ್ದಳು. ಅವಳು ಇನ್ನು ಮುಂದೆ ನನ್ನ ಮಗಳಾಗಿರುವುದಿಲ್ಲ ಎಂದು ಎಂದು ನಾನು ಭಾವಿಸಿದ್ದೆ" ಎಂದು ಹೇಳಿದ್ದಾರೆ.
ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ (28) ಜೊತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಶ್ರದ್ಧಾ ವಾಕರ್ ಅವರನ್ನು ಕಳೆದ ವರ್ಷ ಮೇ 18 ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದನು. ಕೊಲೆ ಮಾಡಿದ ನಂತರ ಆರೋಪಿ ಪೂನಾವಾಲಾ ಆಕೆಯ ದೇಹವನ್ನು ತುಂಡರಿಸಿ, ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿ ನಂತರ ಪೊಲೀಸರು ಹಾಗೂ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಕಸದ ಚೀಲಗಳಲ್ಲಿ ತುಂಬಿ ದೆಹಲಿಯಾದ್ಯಂತ ನಿರ್ಜನ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದನು. ಪ್ರಕರಣ ಬೆಳಕಿಗೆ ಬಂದು ಪೊಲೀಸರು ತನಿಖೆ ಪ್ರಾರಂಭಿಸಿದಾಗ ಆರೋಪಿಯ ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ದೇಹದ ಹಲವು ಭಾಗಗಳು ಪತ್ತೆಯಾಗಿದ್ದವು. ಸಂತ್ರಸ್ತೆ ಶ್ರದ್ಧಾ ಅವರ ತಂದೆಯ ವಿಚಾರಣೆಯನ್ನು ಆಗಸ್ಟ್ 5 ರಂದು ಮುಂದುವರಿಯಲಿದೆ.
ಇದನ್ನೂ ಓದಿ: ಶ್ರದ್ಧಾ ಹತ್ಯೆ: ಚಾರ್ಜ್ಶೀಟ್ ಮಾಹಿತಿ ಬಿತ್ತರಿಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ