ನವದೆಹಲಿ: ಮಧ್ಯಪ್ರದೇಶದ 230 ಶಾಸಕರ ಪೈಕಿ 93 ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಜನಪ್ರತಿನಿಧಿಗಳೇ ಕಾನೂನು ರೀತ್ಯಾ ಕ್ರಮಗಳಿಗೆ ಒಳಗಾಗಿದ್ದಾರೆ ಎಂಬುದನ್ನು ವರದಿಯೊಂದು ಬಹಿರಂಗಪಡಿಸಿದೆ. 93 ಶಾಸಕರ ಪೈಕಿ 52 ಕಾಂಗ್ರೆಸ್ಸಿಗರಿದ್ದರೆ, 39 ಎಂಎಲ್ಎಗಳು ಆಡಳಿತಾರೂಢ ಬಿಜೆಪಿಯವರಾಗಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಮಧ್ಯಪ್ರದೇಶ ಎಲೆಕ್ಷನ್ ವಾಚ್ ಹಾಲಿ ಶಾಸಕರ ಅಪರಾಧ ಪ್ರಕರಣಗಳು, ಆರ್ಥಿಕ ಸ್ಥಿತಿ ಸೇರಿದಂತೆ ಇನ್ನಿತರ ವಿವರಗಳನ್ನು ವಿಶ್ಲೇಷಿಸಿದೆ. ಇದರಲ್ಲಿ ಶಾಸಕರ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣಗಳೂ ಇವೆ. ಜೊತೆಗೆ ಮಹಿಳಾ ಶಾಸಕಿಯರ ಮೇಲೂ ಕ್ರಿಮಿನಲ್ ಮೊಕದ್ದಮೆಗಳಿವೆ ಎಂಬ ವಿಚಾರವೂ ವರದಿಯಲ್ಲಿದೆ.
230 ಹಾಲಿ ಶಾಸಕರ ಪೈಕಿ 93 ಮಂದಿ ಅಂದರೆ ಶೇ.40 ರಷ್ಟು ಜನಪ್ರತಿನಿಧಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ 47 (ಶೇ. 20) ಹಾಲಿ ಶಾಸಕರ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ. ಇದರಲ್ಲಿ ಒಬ್ಬ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿ ಕೊಲೆಗೆ ಸಂಬಂಧಿಸಿದ ಪ್ರಕರಣವೂ ಇದೆ ಎಂದು ಹೇಳಿಕೊಂಡಿದ್ದಾಗಿ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.
ಮಹಿಳಾ ಶಾಸಕಿಯರ ಮೇಲೂ ಕ್ರಿಮಿನಲ್ ಕೇಸ್: ಐಪಿಸಿ ಸೆಕ್ಷನ್ 307 ರ ಅಡಿ 6 ಹಾಲಿ ಶಾಸಕರು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಮಹಿಳಾ ಶಾಸಕಿಯರೂ ಕ್ರಿಮಿನಲ್ ಕೇಸ್ಗಳಲ್ಲಿ ಭಾಗಿಯಾಗಿದ್ದಾರೆ. ಹಾಲಿ ಶಾಸಕಿಯರು ಐಪಿಸಿ ಸೆಕ್ಷನ್ 354 ರ ಅಡಿ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಅಫಿಡವಿಟ್ನಲ್ಲಿ ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.
ಪಕ್ಷವಾರು 'ಕ್ರಿಮಿನಲ್' ಶಾಸಕರು: ಕ್ರಿಮಿನಲ್ ಮತ್ತು ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿರುವರ ಪೈಕಿ ಕಾಂಗ್ರೆಸ್ ಶಾಸಕರೇ ಅಧಿಕವಾಗಿದ್ದಾರೆ. ಕೈ ಪಕ್ಷದ 97 ರ ಪೈಕಿ 52 (ಶೇ. 54) ಶಾಸಕರು ಕ್ರಿಮಿನಲ್ ಕೇಸ್ ಹೊಂದಿದ್ದರೆ, ಬಿಜೆಪಿಯ 129 ಶಾಸಕರಲ್ಲಿ 39 (ಶೇ. 30), ಬಿಎಸ್‌ಪಿಯ ಏಕೈಕ ಶಾಸಕ ಮತ್ತು ಮೂವರು ಸ್ವತಂತ್ರ ಶಾಸಕರಲ್ಲಿ ಒಬ್ಬರು ತಮ್ಮ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂದು ಘೋಷಿಸಿದ್ದಾರೆ. ಇದೆಲ್ಲವೂ ಅಫಿಡವಿಟ್ನಲ್ಲಿ ನಮೂದಾಗಿರುವ ಅಂಕಿ - ಅಂಶಗಳ ಆಧರಿತವಾಗಿವೆ ಎಂದು ಎಡಿಆರ್ ತಿಳಿಸಿದೆ.
ಗಂಭೀರ ಸ್ವರೂಪದ ಕೇಸ್: ಕೊಲೆ, ಕೊಲೆ ಯತ್ನದಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲೂ ಶಾಸಕರು ಇದ್ದು, ಅದರಲ್ಲಿ ಆಡಳಿತಾರೂಢ ಬಿಜೆಪಿಯ 129 ಶಾಸಕರಲ್ಲಿ 20 (ಶೇ. 16), ಕಾಂಗ್ರೆಸ್‌ನ 97 ಶಾಸಕರಲ್ಲಿ 25 (ಶೇ. 26), ಬಿಎಸ್‌ಪಿಯ ಏಕೈಕ ಶಾಸಕ ಮತ್ತು ಮೂವರು ಸ್ವತಂತ್ರರಲ್ಲಿ ಒಬ್ಬ ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ವರದಿ ಹೇಳಿದೆ. 230 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಮಧ್ಯಪ್ರದೇಶದ 230 ಶಾಸಕರ ಪೈಕಿ 186 ಮಂದಿ ಕೋಟ್ಯಧೀಶರು: ಬಿಜೆಪಿಯ 107 ಎಂಎಲ್ಎಗಳ ಸಿರಿಗಿಲ್ಲ ಸಾಟಿ!