ನವದೆಹಲಿ: ಶುಕ್ರವಾರದಂದು ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಕೋಲಾಹಲಗಳ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆ ಕಲಾಪ ಮತ್ತೆ ಪ್ರಾರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಘೋಷಣೆ ಕೂಗಲಾರಂಭಿಸಿದರು. ಕೂಡಲೇ ಸಭಾಧ್ಯಕ್ಷರು ದಿನದ ಕಲಾಪವನ್ನು ರದ್ದುಗೊಳಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಲೋಕಸಭೆಯಲ್ಲಿ ಬಿಜೆಪಿ ಸಂಸದರು ಗಲಾಟೆ ಎಬ್ಬಿಸಿದರು. ಹೀಗಾಗಿ ಸದನದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ಸಂಸದರು ಗದ್ದಲ ಎಬ್ಬಿಸಿದ್ದರಿಂದ ಮಧ್ಯಾಹ್ನ 12ಕ್ಕೆ ಕಲಾಪ ಮುಂದೂಡಲಾಗಿತ್ತು. ರಾಜ್ಯಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಕೋಲಾಹಲ ಸೃಷ್ಟಿಸಿದ್ದರು.
ಗುಜರಾತಿನ ಕಳ್ಳಬಟ್ಟಿ ಸಾರಾಯಿ ದುರಂತ ಹಾಗೂ ಹಣದುಬ್ಬರದ ಬಗ್ಗೆ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳ ಸದಸ್ಯರು ಹಾಗೂ ರಾಷ್ಟ್ರಪತಿಗಳಿಗೆ ಅಪಮಾನ ಮಾಡಿದ್ದಕ್ಕೆ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕೆಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದು ಎರಡೂ ಕಡೆಯವರು ಘೋಷಣೆಗಳನ್ನು ಕೂಗಲಾರಂಭಿಸಿದ್ದರಿಂದ ಸದನದಲ್ಲಿ ಗದ್ದಲವೇರ್ಪಟ್ಟಿತ್ತು. ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಉಪ ಸಭಾಪತಿ ಹರಿವಂಶ್ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.
ಇದನ್ನೂ ಓದಿ: ಈ ಹೆಡ್ಮಾಸ್ತರಿಗೆ ರಾಜ್ಯದ ಸಿಎಂ ಹೆಸ್ರು ಗೊತ್ತಿಲ್ಲ, ಡಿಸಿ ಯಾರೆಂಬುದು ತಿಳಿದೇ ಇಲ್ಲ