ರಾಯಪುರ(ಛತ್ತೀಸ್ಗಢ): 30 ವರ್ಷಗಳಿಂದ ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅಭಿನಯಿಸುತ್ತಿದ್ದ ನಟ ಶಹನವಾಜ್ ಪ್ರಧಾನ್ ಶುಕ್ರವಾರ ನಿಧನರಾಗಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನ್ಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮೊದಲೆ ಪ್ರಾಣಪಕ್ಷಿ ಹಾರಿಹೋಗಿತ್ತು. ಶಹನವಾಜ್ ಪ್ರಧಾನ್ ನಿಧನಕ್ಕೆ ಸಿನಿಮಾ ಲೋಕದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಹನವಾಜ್ ಪ್ರಧಾನ್ ಅವರು ಶ್ರೀ ಕೃಷ್ಣ ಮತ್ತು ಅಲಿಫ್ ಲೈಲಾ ಧಾರಾವಾಹಿಗಳೊಂದಿಗೆ ಅನೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಜನಪ್ರಿಯ ವೆಬ್ ಸೀರೀಸ್ ಮಿರ್ಜಾಪುರದಲ್ಲಿ ಪೊಲೀಸ್ ಪಾತ್ರವನ್ನು ಮತ್ತು ಫ್ಯಾಂಟಮ್ ಚಿತ್ರದಲ್ಲಿ ಹಫೀಜ್ ಸಯೀದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಲ್ಲದೇ, ಅವರು ಅನೇಕ ವೆಬ್ ಸರಣಿಗಳು ಮತ್ತು ಚಲನಚಿತ್ರಗಳಲ್ಲಿ ಪೋಷಕ ನಟನ ಪಾತ್ರವನ್ನು ನಿರ್ವಹಿಸಿದ್ದಾರೆ.
ಶಹನವಾಜ್ ಬಣ್ಣದ ಲೋಕದ ಪಯಣ: ಶಹನವಾಜ್ ಪ್ರಧಾನ್ ಅವರ ವಿದ್ಯಾಭ್ಯಾಸ ನಡೆದದ್ದು ಛತ್ತೀಸ್ಗಢದ ರಾಯಪುರದಲ್ಲಿನ ದೀಕ್ಷಾ ಎಂಬ ಶಾಲೆಯಲ್ಲಿ. ಶಾಲಾ ದಿನಗಳಿಂದಲೂ ನಾಟಕಗಳಲ್ಲಿ ಪಾಲ್ಗೊಂಡು ಅಭಿನಯಕ್ಕೆ ಪದಾರ್ಪಣೆ ಮಾಡಿದ್ದರು. ನಂತರ ಅವರು ರಾಯ್‌ಪುರದಲ್ಲಿ ನಾಟಕ ತಂಡವನ್ನು ಸೇರುವ ಮೂಲಕ ತಮ್ಮ ನಟನಾ ವೃತ್ತಿ ಜೀವನಕ್ಕೆ ಪ್ರವೇಶಿಸಿದರು.
ಆನಂದ್ ವರ್ಮಾ, ಮಿರ್ಜಾ ಮಸೂದ್ ಜಲೀಲ್ ರಿಜ್ವಿ ಮತ್ತು ಹಬೀಬ್ ತನ್ವೀರ್ ಅವರಂತಹ ಗುರುಗಳ ಕೈಯಿಂದ ಪ್ರಧಾನ್ ಅವರು ನಟನಾ ಕೌಶಲ್ಯವನ್ನು ಕಲಿತರು. 1984ರಲ್ಲಿ ಹಬೀಬ್ ತನ್ವೀರ್ ಅವರ ನಯಾ ಥಿಯೇಟರ್‌ನಲ್ಲಿ ಸೇರಿಕೊಂಡು ಅಭಿನಯದ ಬಗ್ಗೆ ಅಭ್ಯಾಸ ಮಾಡಿದರು. ನಯಾ ಥಿಯೇಟರ್ ಮೂಲಕ ದೆಹಲಿ, ಮುಂಬೈ ಮತ್ತು ಇತರ ದೊಡ್ಡ ನಗರಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ಶಾನವಾಜ್ ಪ್ರಧಾನ್ 1991 ರಿಂದ ಮುಂಬೈಗೆ ಹೋಗಿ ದೂರದರ್ಶನ ಮತ್ತು ಚಲನಚಿತ್ರಗಳಿಗೆ ಸೇರಿಕೊಂಡರು. ನಂತರ ಅವರಿಗೆ ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಒದಗಿ ಬಂತು.
ಸಾಮಾಜಿಕ ಜಾಲತಾಣದಲ್ಲಿ ಗಣ್ಯರಿಂದ ಶ್ರದ್ಧಾಂಜಲಿ: ನಟ ಯಶಪಾಲ್ ಶರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬರೆಯುವ ಮೂಲಕ ಶಹನವಾಜ್ ಪ್ರಧಾನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶರ್ಮಾ ಅವರು," ಶಹನವಾಜ್ ಪ್ರಧಾನ್ ಅವರು ಮುಂಬೈನ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ರಿಜ್ ಡೈಮ್ ಡ್ಯಾರೆಲ್ಸ್ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿತ್ತು. ನೂರಾರು ಕಲಾವಿದರು ಸೇರಿದ್ದೆವು.
ಆದರೆ, ಪ್ರಶಸ್ತಿ ಸ್ವೀಕರಿಸಿದ ಸ್ವಲ್ಪ ಸಮಯದ ನಂತರ ಶಹನವಾಜ್ ಪ್ರಧಾನ್ ಅವರಿಗೆ ಹೃದಯಾಘಾತವಾಯಿತು. ಅಲ್ಲಿ ನೆರೆದಿದ್ದ ಜನರು ಮತ್ತು ವೈದ್ಯರ ಸಹಾಯದಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕಾರಿನಲ್ಲಿ ಕೋಕಿಲಾ ಬೆನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ,ಆಸ್ಪತ್ರೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದರು. ಅವರ ಆತ್ಮಕ್ಕೆ ಶಾಂತಿಸಿಗಲಿ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಂಜಾಬಿ ಹಾಸ್ಯನಟ ಅಮೃತ್ಪಾಲ್ ಚೋಟು ನಿಧನ