ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ಬೆಂಗಾಲಿ ನಟಿ, ರೂಪದರ್ಶಿ ನಂದಿತಾ ದತ್ತ ಮತ್ತು ಅವರ ಮ್ಯಾನೇಜರ್ ಮಾಣಿಕ್ ಘೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ(Pornography Case)ದಲ್ಲಿ ಉದ್ಯಮಿ ರಾಜ್ ಕುಂದ್ರಾ ಪ್ರಕರಣ ದೇಶಾದ್ಯಂತ ಸದ್ದು ಮಾಡ್ತಿರುವ ಸಂದರ್ಭದಲ್ಲೇ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ.
ನಂದಿತಾ ದತ್ತ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಒಟಿಟಿ ಮೂಲಕ ಪ್ರಸಾರ ಮಾಡುತ್ತಿದ್ದರು ಎಂದು ಆರೋಪಿಸಿ, ಜುಲೈ 26ರಂದು ಇಬ್ಬರು ಯುವತಿಯರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಂದಿತಾ ಮ್ಯಾನೇಜರ್ ಮಾಣಿಕ್ ಘೋಷ್ ಕೂಡ ನೀಲಿ ಚಿತ್ರಗಳ ನಿರ್ಮಾಣದಲ್ಲಿ ಪಾಲುದಾರನಾಗಿದ್ದ ಎನ್ನಲಾಗ್ತಿದೆ. ಕೋಲ್ಕತ್ತಾದ ಹೊರ ವಲಯದ ಬಂಗಲೆಗಳನ್ನು ಬಾಡಿಗೆಗೆ ಪಡೆದು ಅಲ್ಲಿ ನೀಲಿ ಚಿತ್ರಗಳ ವಿಡಿಯೊಗಳನ್ನು ಚಿತ್ರೀಕರಿಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ, ಇದಕ್ಕಾಗಿ ರೂಪದರ್ಶಿಗಳ ಹಾಗೂ ಸಿನಿಮಾಗಳ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭೆಗೆಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗ್ತಿದೆ.
ಸದ್ಯ ಈ ಪ್ರಕರಣ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.