ಎರ್ನಾಕುಲಂ (ಕೇರಳ): ನಟಿಗೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್ 3ರಂದು ನಡೆಯಬೇಕಿದ್ದ ವಿಚಾರಣೆಯನ್ನು ಒಂದು ವಾರದ ಮಟ್ಟಿಗೆ ತಡೆ ಹಿಡಿದು ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ.
ಕೆಲವು ದಿನಗಳ ಹಿಂದೆ ಟ್ರಯಲ್ ಕೋರ್ಟ್ ವಿಚಾರಣೆ ವೇಳೆ ನಟಿಗೆ ಕಳಂಕ ತರುವ ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳಿತ್ತು ಎಂದು ನಟಿ ಪರ ವಕೀಲರು ಹೈಕೋರ್ಟ್ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದರ ಜೊತೆಗೆ ಎರ್ನಾಕುಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ ಪ್ರಕರಣವನ್ನು ಬೇರೆ ಕೋರ್ಟ್ಗೆ ವರ್ಗಾವಣೆ ಮಾಡಲು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಈ ವೇಳೆ ಸ್ಪಷ್ಟನೆ ನೀಡಿದ ಹೈಕೋರ್ಟ್, ಇಂತಹ ಪ್ರಶ್ನೆಗಳನ್ನು ಕೇಳಲು ಕೆಲವೊಮ್ಮೆ ಅವಕಾಶವಿರುತ್ತದೆ ಎಂದು 20ಕ್ಕೂ ಹೆಚ್ಚು ವಕೀಲರಿಗೆ ರಹಸ್ಯ ವಿಚಾರಣೆ ನಡೆಸಲು ಅನಮತಿ ನೀಡಲಾಗಿರುತ್ತದೆ ಎಂದು ಹೇಳಿತ್ತು. ಕೇರಳ ಸರ್ಕಾರವೂ ಕೂಡ ನಟಿಯ ವಿಚಾರಣೆಗೆ ಸಂಬಂಧಿಸಿದಂತೆ "ಎರ್ನಾಕುಲಂ ಟ್ರಯಲ್ ಕೋರ್ಟ್ ವಿಚಾರಣೆ ನಡೆಸುವಲ್ಲಿ ವಿಫಲವಾಗಿದೆ'' ಎಂದು ಆರೋಪಿಸಿ ''ಟ್ರಯಲ್ ಕೋರ್ಟ್ ಸಾಕ್ಷಿಗಳ ಹೇಳಿಕೆಯನ್ನು ಸಂಪೂರ್ಣವಾಗಿ ದಾಖಲಿಸಿಲ್ಲ'' ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಪ್ರಕರಣದ ಎಂಟನೇ ಆರೋಪಿ ದಿಲೀಪ್ ತಮ್ಮ ಮಗಳ ಮೂಲಕ ಪ್ರಕರಣದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದನ್ನು ಟ್ರಯಲ್ ನ್ಯಾಯಾಲಯ ಪರಿಗಣಿಸಿಲ್ಲ ಎಂಬುದನ್ನು ಕೇರಳ ಸರ್ಕಾರ ಉಲ್ಲೇಖಿಸಿತ್ತು.
ರಾಜ್ಯ ಸರ್ಕಾರ ಹಾಗೂ ಸಂತ್ರಸ್ತೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಒಂದು ವಾರದ ಮಟ್ಟಿಗೆ ವಿಚಾರಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವೊಂದು ಟ್ರಯಲ್ ಕೋರ್ಟ್ ವಿರುದ್ಧ ಧ್ವನಿಯೆತ್ತಿದ ಅಪರೂಪದ ಪ್ರಕರಣ ಇದೆಂದು ಕಾನೂನು ಮತ್ತು ನ್ಯಾಯಾಂಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.