ವಿಲ್ಲುಪುರಂ(ತಮಿಳುನಾಡು): ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಬಂಧಿಸಲಾಗಿದೆ. ಹಣ ವಂಚನೆ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟಿ ಹಾಗೂ ರಾಜಸ್ಥಾನದ ಯುವಕ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ 2018ರಿಂದ ಸ್ನೇಹಿತರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಇಂದು ವಿಲ್ಲುಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ 15 ಪುಟಗಳ ದೂರು ಸಲ್ಲಿಸಿದ್ದು, ಚಿತ್ರ ನಿರ್ಮಾಣ ಮಾಡುವ ಉದ್ದೇಶದಿಂದ ನನ್ನ ಬಳಿ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡು ವಾಪಸ್ ಕೊಟ್ಟಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಜೊತೆಗೆ ಖಾಸಗಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಹೇಳಿದ್ದಾರೆ. ವಿಲ್ಲುಪುರಂನ ಆರೋವಿಲ್ಲೆ ಬಳಿಯ ಸ್ವಂತ ಮನೆಯಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆಕೆ ತಿಳಿಸಿದ್ದಾರೆ.
ಇದನ್ನೂ ಓದಿ: 'ಆಡೈ' ನಂತರ ಮತ್ತೆ ನಗ್ನರಾದ್ರು ಅಮಲಾ ಪೌಲ್, ಯಾವ ಸಿನಿಮಾಗೆ ಹೀಗೆ?
ಬಂಧಿತನನ್ನು ಜೈಪುರ ಮೂಲದ ಬವೇಂದರ್ ಸಿಂಗ್ ದತ್ ಎಂದು ಗುರುತಿಸಲಾಗಿದೆ. ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬವೇಂದರ್ ಸೇರಿದಂತೆ 12 ಜನರ ವಿರುದ್ಧ ವಿಲ್ಲುಪುರಂ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ 11 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.