ಚಂಡೀಗಢ (ಪಂಜಾಬ್): 15 ವರ್ಷದ ಕಾಫಿ ಎಂಬ ವಿದ್ಯಾರ್ಥಿನಿ ಗುರಿ ಸಾಧಿಸಲು ಅಂಗವೈಕಲ್ಯ ಅಡ್ಡಿಯಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಕಣ್ಣಿನ ದೃಷ್ಟಿ ಕಳೆದುಕೊಂಡರೂ ಇವರು ಓದುವ ಉತ್ಸಾಹ ಕಳೆದುಕೊಳ್ಳಲಿಲ್ಲ. CBSE ಪಠ್ಯಕ್ರಮದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 95.2 ಅಂಕ ಗಳಿಸಿ ತನ್ನ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಸಂಪೂರ್ಣ ವಿವರ: ಹಿಸ್ಸಾರ್ ನಿವಾಸಿ ಪವನ್ ಎಂಬವರ ಮಗಳು ಕಾಫಿ ಚಂಡೀಗಢದ ಇನ್‌ಸ್ಟಿಟ್ಯೂಟ್ ಆಫ್ ಬ್ಲೈಂಡ್ ವಿದ್ಯಾರ್ಥಿನಿ. ಹುಟ್ಟೂರು ಹಿಸ್ಸಾರ್‌ನಲ್ಲಿ ಹೋಳಿ ಆಡುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಮೂವರು ದುರುಳರು ಆಕೆಯ ಮೇಲೆ ಆ್ಯಸಿಡ್ ಎರಚಿದ್ದರು. ಮುಖ ತೀವ್ರವಾಗಿ ಸುಟ್ಟು ಹೋಗಿತ್ತು. ಎರಡೂ ಕಣ್ಣುಗಳಿಗೆ ಹಾನಿಯಾಗಿತ್ತು. ಮುಂದಿನ 6 ವರ್ಷ ಕಾಫಿಯ ಪೋಷಕರು ದೆಹಲಿಯ ಏಮ್ಸ್ ಸೇರಿದಂತೆ ಅನೇಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.
ಪವನ್ ಅವರು ಸೆಕ್ರೆಟರಿಯೇಟ್‌ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಸಿಬಿಎಸ್‌ಇ ಪಠ್ಯಕ್ರಮ ಶಾಲೆಗೆ ಸೇರಿಸಿದ್ದರು. ವ್ಯಾಸಂಗಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿದ್ದರು. ತಾಯಿ ಸೂಕ್ತ ಬೆಂಬಲ ನೀಡುತ್ತಿದ್ದರು. ಸ್ನೇಹಿತರು, ಶಿಕ್ಷಕರ ಪ್ರೋತ್ಸಾಹ ಸಿಕ್ಕಿದೆ. ಓದಲು ಸಾಧ್ಯವಾಗದು ಎಂಬ ನಿರಾಶೆ ಬಾಲಕಿಯನ್ನು ಎಂದಿಗೂ ಬಾಧಿಸಲಿಲ್ಲ.
"ಆಗ ನನ್ನ ಮಗಳಿಗೆ 3 ವರ್ಷ. ಹೋಳಿ ಹಬ್ಬ ನಡೆಯುತ್ತಿತ್ತು. ನೆರೆಹೊರೆಯವರು ಆ್ಯಸಿಡ್ ದಾಳಿ ಮಾಡಿದ್ದರು. ಆಕೆ ದೃಷ್ಟಿ ಕಳೆದುಕೊಂಡಳು. ದೃಷ್ಟಿ ಮರಳಿ ತರಲು ಸಾಕಷ್ಟು ಪ್ರಯತ್ನಿಸಿದೆವು. ಹಲವು ವರ್ಷ ಅನೇಕ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿದೆವು. ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ದೃಷ್ಟಿ ಬರುವುದು ಕಷ್ಟ" ಎಂದು ಹೇಳಿರುವುದಾಗಿ ಪವನ್ ತಿಳಿಸಿದರು.
ಹಲವು ಕಷ್ಟಗಳು ಎದುರಾದವು. ಕೆಲವರ ಸಲಹೆಯಿಂದ ಮಗಳನ್ನು ಇಲ್ಲಿಯವರೆಗೆ ಕಲಿಸಲು ಸಾಧ್ಯವಾಯಿತು. ಪೋಷಕರಿಗೆ ನನ್ನ ಮನವಿ ಒಂದೇ. ಮಕ್ಕಳನ್ನು ನಿರಾಸೆಗೊಳಿಸಬೇಡಿ. ಅವರ ಗುರಿಗಳನ್ನು ಸಾಧಿಸಲು ನೆರವಾಗಿ. ನನ್ನ ಮಗಳಿಗೆ ಐಎಎಸ್ ಆಗಬೇಕೆಂಬ ಆಸೆ ಇದೆ. ಆಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಘೋರ ಅಪರಾಧ ಎಸಗಿದ ಮೂವರು ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದಾರೆ. ಆರೋಪಿಗೆ ಶಿಕ್ಷೆ ವಿನಾಯಿತಿ ನೀಡಿದ ಕೋರ್ಟ್ ಆದೇಶದ ವಿರುದ್ಧ ಪವನ್ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.
"ನಾನು ಬದುಕಿರುವವರೆಗೂ ಅವಳಿಗೆ ಎಲ್ಲವನ್ನೂ ಒದಗಿಸುತ್ತೇನೆ. ತಾಯಿಯಾಗಿ ಇದು ನನ್ನ ಜವಾಬ್ದಾರಿ. ಬೇಟಿ ಬಚಾವೋ ಬೇಟಿ ಪಡಾವೋ ಎಂದು ಪ್ರಧಾನಿ ಮೋದಿ ಹೇಳಿದರು. ಬೇಕಾಗಿರುವುದು ಇಷ್ಟೇ. ಮಕ್ಕಳಿಗೆ ಶಿಕ್ಷಣ ಕೊಡಿ. ಅವರ ಗುರಿ ತಲುಪಲು ಬೆಂಬಲಿಸಿ ಎಂದು ತಾಯಿ ಸಂದೇಶ ನೀಡಿದರು.
ಕಾಫಿ ಮಾತನಾಡಿ, "ಸಿಬಿಎಸ್‌ಇ ಹತ್ತನೇ ಪರೀಕ್ಷೆಯಲ್ಲಿ ಶೇ.95.2 ಅಂಕ ಪಡೆದಿದ್ದೇನೆ. ಶಾಲೆಯಲ್ಲಿ ಟಾಪರ್ ಆಗಿದ್ದೇನೆ. ಕುಟುಂಬಸ್ಥರು, ಸ್ನೇಹಿತರು ಹಾಗು ಶಿಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಯಾವುದೇ ಸಂದೇಹ ಕೇಳಿದರೂ ತಕ್ಷಣ ನಿವಾರಿಸುತ್ತಿದ್ದರು. ರಜಾ ದಿನಗಳಲ್ಲಿ ಆನ್‌ಲೈನ್ ಮುಖಾಂತರ ತರಗತಿಗಳನ್ನು ನೀಡುತ್ತಿದ್ದರು" ಎಂದರು.
"ದಿನಕ್ಕೆ ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಓದುತ್ತಿದ್ದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಮಾರ್ಗದರ್ಶಿಗಳು ಮತ್ತು ಮಾದರಿ ಪೇಪರ್‌ಗಳು ಲಭ್ಯವಿದೆ. ನಮ್ಮಂತಹವರಿಗೆ ಯಾವುದೇ ಪ್ರಯೋಜನವಿಲ್ಲ. ಇದು ಸ್ವಲ್ಪ ಬೇಸರದ ಸಂಗತಿ. ಆದರೆ ಪಠ್ಯಕ್ರಮಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಪಾಠಗಳು ನಮಗೆ ಯೂಟ್ಯೂಬ್ ಮೂಲಕ ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ಲಭ್ಯವಿದೆ. ಇವು ನನಗೆ ತುಂಬಾ ಉಪಯುಕ್ತವಾದವು. IAS ಅಧಿಕಾರಿಯಾಗಬೇಕೆಂಬುದು ನನ್ನ ಕನಸು. ಇದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ" ಎನ್ನುವುದು ವಿದ್ಯಾರ್ಥಿನಿ ಕಾಫಿ ನುಡಿ.
ಇದನ್ನೂ ಓದಿ: ವ್ಯಾಪಾರದಲ್ಲಿ ನಷ್ಟವಾಗಿದ್ದಕ್ಕೆ ಬಡ ಯುವತಿಯರ ಕರೆ ತಂದು ನಗ್ನ ಪೂಜೆ, ಲೈಂಗಿಕ ದೌರ್ಜನ್ಯ!