ಮುಂಬೈ: ಯುವತಿಯನ್ನ ರೇಗಿಸಿದ್ದಕ್ಕಾಗಿ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರೆಂದು ಕೋಪಗೊಂಡು ಆರೋಪಿಗಳು ಸಂತ್ರಸ್ತ ಯುವತಿ ಮತ್ತು ಆಕೆಯ ಇಬ್ಬರು ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ನವಿಮುಂಬೈನ ವಾಶಿಯಲ್ಲಿ ಈ ಘಟನೆ ನಡೆದಿದ್ದು, ಕುಡುಗೋಲಿನಿಂದ ಹಲ್ಲೆ ನಡೆಸಲಾಗಿದೆ. ಎಪಿಎಂಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೊಳಗಾದ ಕುಟುಂಬದ ಯುವತಿಯನ್ನು ಚುಡಾಯಿಸಿದ್ದಕ್ಕಾಗಿ ಆಕೆಯ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವಿಚಾರಕ್ಕೆ ಯುವತಿ ಹಾಗೂ ಆರೋಪಿಗಳ ಕುಟುಂಬದ ನಡುವೆ ಜಗಳ ಏರ್ಪಟ್ಟಿತ್ತು. ಇದೀಗ ಏಕಾಏಕಿ ಯುವತಿ ಕುಟುಂಬದ ಮೇಲೆ ದಾಳಿ ನಡೆಸಿ ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಶ್ರೀನಿವಾಸ ಅಯ್ಯರ್ ಎಂಬುವವರನ್ನು ಬಂಧಿಸಲಾಗಿದ್ದು, ಇತರ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.