ಸೇಲಂ (ತಮಿಳುನಾಡು): ಮಾಜಿ ಸಿಎಂ, ದಿವಂಗತೆ ಜಯಲಲಿತಾ ಅವರ ಕಾರು ಚಾಲಕನಾಗಿದ್ದ ಕನಗರಾಜ್ ಎಂಬಾತ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಪ್ರಕರಣವನ್ನು ಮತ್ತೆ ತೆರೆಯಲಾಗಿದ್ದು, ಶೀಘ್ರದಲ್ಲೇ ತನಿಖೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೇಲಂ ಜಿಲ್ಲೆಯ ಕೋರ್ಟ್ ಆದೇಶದ ಅನ್ವಯ ಈ ಪ್ರಕರಣನ್ನು ಮತ್ತೆ ತೆರೆಯಲಾಗುತ್ತದೆ. ಆದಷ್ಟು ಶೀಘ್ರದಲ್ಲೇ ತನಿಖೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ತಮಿಳುನಾಡಿನ ಸೇಲಂ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
2017ರ ಏಪ್ರಿಲ್ 28ರಂದು ಕನಗರಾಜ್ ತನ್ನ ಬೈಕ್ನಲ್ಲಿ ಸೇಲಂ-ಚೆನ್ನೈ ಹೆದ್ದಾರಿಯನ್ನು ದಾಟುವ ವೇಳೆ ಅಪಘಾತ ಸಂಭವಿಸಿ, ಸಾವನ್ನಪ್ಪಿದ್ದನು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಕನಗರಾಜ್ ಮದ್ಯಸೇವಿಸಿ, ಬೈಕ್ ಚಾಲನೆ ಮಾಡುತ್ತಿದ್ದ ಕಾರಣದಿಂದ ಅಪಘಾತ ಜರುಗಿದೆ ಎಂದು ವರದಿ ನೀಡಿ, ಪ್ರಕರಣವನ್ನು ಅಂತ್ಯಗೊಳಿದ್ದರು..
ಕೇಸ್ ರೀ ಓಪನ್ ಏಕೆ?
ಕನಗರಾಜ್ ಕೊಲೆ ಮತ್ತು ದರೋಡೆಯೊಂದರ ಪ್ರಮುಖ ಆರೋಪಿಯೂ ಆಗಿದ್ದನು. ಆತ ಸಾವನ್ನಪ್ಪುವ ಐದು ದಿನ ಮುನ್ನ ನೀಲಗಿರಿ ಜಿಲ್ಲೆಯ ಕೊಡನಾಡ್ ಎಸ್ಟೇಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ನ ಕೊಲೆಯೊಂದು ನಡೆದು, ಅಲ್ಲಿಂದ ಕೆಲವೊಂದು ವಸ್ತುಗಳನ್ನು ದರೋಡೆ ಮಾಡಲಾಗಿತ್ತು. ಈ ಕೊಲೆ ಮತ್ತು ದರೋಡೆಯ ಆರೋಪವೂ ಕನಗರಾಜ್ ಮೇಲಿತ್ತು.
ಅಷ್ಟೇ ಅಲ್ಲದೇ ಇದೇ ವೇಳೆ ಕೊಡನಾಡ್ ಎಸ್ಟೇಟ್ ಕೊಲೆ ಮತ್ತು ದರೋಡೆಯ ಮತ್ತೊಬ್ಬ ಆರೋಪಿಯಾದ ಸಯಾನ್ ಎಂಬಾತನಿಗೂ ಅಪಘಾತವಾಗಿ ಆತ ತನ್ನ ಪತ್ನಿ ಮತ್ತು ಮಗಳನ್ನು ಕಳೆದುಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಕನಗರಾಜ್ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದರು.
ಈಗ ಕೊಡನಾಡ್ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮತ್ತು ದರೋಡೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಕನಗರಾಜ್ ಅಪಘಾತಕ್ಕೂ ನಂಟಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ.
ಇದನ್ನೂ ಓದಿ: ಬಾಲಿವುಡ್ ತಾರೆಯರಿಂದ ಹಣ ಪಡೆಯಲು ಸಮೀರ್ ವಾಂಖೆಡೆ ದುಬೈ ತೆರಳಿದ್ದರು: ನವಾಬ್ ಮಲಿಕ್ ಆರೋಪ