ನವದೆಹಲಿ: ಉಕ್ರೇನ್ ಯುದ್ಧವನ್ನು ಕೇಂದ್ರದ ಬಿಜೆಪಿ ಸರ್ಕಾರ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಕೆಲವು ಕೇಂದ್ರ ಸಚಿವರ ನಡೆ, ಅಸಂಬದ್ಧ ಮತ್ತು ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಹೇಳಿದರು.
ಯುದ್ಧಪೀಡಿತ ಉಕ್ರೇನ್ನಿಂದ ಪಾರಾಗಿ ತಾಯ್ನಾಡಿಗೆ ಮರಳಿರುವ ವಿದ್ಯಾರ್ಥಿಗಳನ್ನು ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಸ್ವಾಗತಿಸಲು ತೆರಳಿರುವ ಕೇಂದ್ರ ಸಚಿವರ ನಡೆಯನ್ನು ಬುಧವಾರ ತಿವಾರಿ ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಮಾನ್ಸುಖ್ ಮಾಂಡವೀಯ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಮತ್ತೊಂದು ಟ್ವೀಟ್ ಮಾಡಿರುವ ಮನೀಶ್ ತಿವಾರಿ, ಎನ್ಡಿಎ ಸರ್ಕಾರದ ಬಡಾಯಿ ಕರುಣಾಜನಕವಾಗಿದೆ. ನೀವು ಉಕ್ರೇನ್ನಲ್ಲಿರುವ ಭಾರತೀಯರ ರಕ್ಷಣೆ ಮಾಡುತ್ತಿರುವುದು ನಿಮ್ಮ ಕರ್ತವ್ಯ. ಯಾರಿಗೂ ನೀವು ಉಪಕಾರ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಇದರ ಜೊತೆಗೆ, 1990ರಲ್ಲಿ ನಡೆದ ಮೊದಲ ಗಲ್ಫ್ ಯುದ್ಧದ ಸಮಯದಿಂದಲೂ ಅನೇಕ ರಾಷ್ಟ್ರಗಳಲ್ಲಿ ಯುದ್ಧಗಳಾಗಿವೆ. ಎಲ್ಲಾ ಸಮಯದಲ್ಲಿಯೂ ಕೂಡಾ ಭಾರತ ಸರ್ಕಾರ ದೇಶದ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಿವೆ ಎಂದು ಹೇಳಿದ್ದು, ಯಾವ ಸರ್ಕಾರವೂ ಪ್ರಚಾರವನ್ನು ಬಯಸಿರಲಿಲ್ಲ ಎಂಬರ್ಥದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಎನ್ಐನೊಂದಿಗೆ ಮಾತನಾಡಿರುವ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರಾದ ಮಾನ್ಸುಖ್ ಮಾಂಡವೀಯ, ಜ್ಯೋತಿರಾಧಿತ್ಯ ಸಿಂಧಿಯಾ, ಸ್ಮೃತಿ ಇರಾನಿ, ವಿ.ಕೆ.ಸಿಂಗ್ ಅವರು ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಡನೆ ಮಾತನಾಡಿದ್ದರು.
ಇದನ್ನೂ ಓದಿ: 'ಉಕ್ರೇನ್ನಲ್ಲಿ ಈವರೆಗೆ 2,000 ನಾಗರಿಕರು, ರಷ್ಯಾದ 6,000 ಯೋಧರ ಸಾವು'