ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಐಎಸ್‌ಐ ಸಂಘಟನೆಯ ಶಂಕಿತ ಏಜೆಂಟ್ ಮತ್ತು ನಕಲಿ ನೋಟು ಪ್ರಕರಣದ ರೂವಾರಿ ತೆಹ್ಸೀಮ್ ಎಂಬಾತನನ್ನು ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ ತಂಡ (ಎಸ್‌ಟಿಎಫ್) ಬಂಧಿಸಿದೆ. ಈತ ಹಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ಎಂದು ವರದಿಯಾಗಿದೆ.
ಆರೋಪಿ ತೆಹ್ಸೀಮ್ ಶಾಮ್ಲಿ ಜಿಲ್ಲೆಯ ನಿವಾಸಿಯಾಗಿದ್ದು, ಪಾಕಿಸ್ತಾನದ ಐಎಸ್‌ಐ ಏಜೆಂಟ್ ಎಂಬ ಶಂಕೆ ಮೇರೆಗೆ ಆತನ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಇದಾದ ನಂತರ ಪರಾರಿಯಾಗಿದ್ದ ಆರೋಪಿ ಇದೀಗ ಬಲೆಗೆ ಬಂದಿದ್ದಾನೆ. ಗುರುವಾರ ಮೀರತ್ - ಕರ್ನಾಲ್ ಹೆದ್ದಾರಿಯಲ್ಲಿರುವ ಸೇತುವೆಯ ಕೆಳಗೆ ಈತನನ್ನು ಬಂಧಿಸಿರುವ ಎಸ್‌ಟಿಎಫ್ ತಂಡವು ಈಗಾಗಲೇ ಶಾಮ್ಲಿ ಪೊಲೀಸರಿಗೆ ಹಸ್ತಾಂತರಿಸಿದೆ.
ತೆಹ್ಸೀಮ್ ಹಿನ್ನೆಲೆ: ಕೆಲ ವರ್ಷಗಳ ಹಿಂದೆ ಶಾಮ್ಲಿ ನಿವಾಸಿ 70 ವರ್ಷದ ನಫೀಸ್ ಅಹ್ಮದ್ ಎಂಬಾತ ತನ್ನ ಪತ್ನಿ ಅಮಾನ ಮತ್ತು ಮಗ ಕಲೀಂನೊಂದಿಗೆ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದ. 2022ರ ಜುಲೈನಲ್ಲಿ ಹಿಂದಿರುಗುತ್ತಿದ್ದಾಗ ವಾಘಾ ಗಡಿಯಲ್ಲಿ ಇವರನ್ನು ಪಾಕಿಸ್ತಾನಿ ಅಧಿಕಾರಿಗಳು ಹಿಡಿದಿದ್ದರು. ಇದಾದ ನಂತರ ಮೂವರನ್ನೂ ಪಾಕಿಸ್ತಾನದ ಜೈಲಿಗೆ ಹಾಸಲಾಗಿತ್ತು.
ಐಎಸ್‌ಐ ಏಜೆಂಟ್: ಬಳಿಕ ಮೂವರೂ 2023ರ ಆಗಸ್ಟ್ನಲ್ಲಿ ಪಾಕ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಪಾಕಿಸ್ತಾನ ರೇಂಜರ್‌ಗಳು ವಾಘಾ ಗಡಿಯಲ್ಲಿ ಈ ಕುಟುಂಬವನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್)ಗೆ ಹಸ್ತಾಂತರಿಸಿದ್ದರು. ಇದಾದ ಬಳಿಕ ಶಾಮ್ಲಿ ಜಿಲ್ಲೆಗೆ ನಫೀಸ್ ಅಹ್ಮದ್ ಕುಟುಂಬ ಮರಳಿತ್ತು. ಆದರೆ, ಇದಾದ ಕೆಲವೇ ದಿನಗಳಲ್ಲಿ ಕಲೀಮ್ ಮತ್ತು ಆತನ ಹಿರಿಯ ಸಹೋದರ ತೆಹ್ಸೀಮ್ ಐಎಸ್‌ಐ ಏಜೆಂಟ್ ಎಂದು ಎಸ್‌ಟಿಎಫ್ ಬಹಿರಂಗ ಪಡಿಸಿತ್ತು.
ನಕಲಿ ನೋಟುಗಳು ಪತ್ತೆ ಪ್ರಕರಣ: ಅಲ್ಲದೇ, ಆಗಲೇ ಕಲೀಂನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮತ್ತೊಂದೆಡೆ, ಅಂದಿನಿಂದ ತೆಹ್ಸೀಮ್ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಅಷ್ಟೇ ಅಲ್ಲ, ಆಗಸ್ಟ್ 2ರಂದು 6 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಈ ಆರೋಪಿಗಾಗಿ ಎಸ್‌ಟಿಎಫ್ ಹುಡುಕುತ್ತಿತ್ತು.
ಸದ್ಯ ಎಸ್‌ಟಿಎಫ್ ತಂಡವು ಆರೋಪಿ ತೆಹ್ಸೀಮ್‌ನನ್ನು ಬಂಧಿಸಿದೆ. ಈತ ಬಗ್ಗೆ ದೇಶದ ಭದ್ರತಾ ಏಜೆನ್ಸಿಗಳು ಸಹ ಹೆಚ್ಚಿನ ತನಿಖೆ ಕೈಗೊಂಡಿವೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನವೇ ಶಂಕಿತ ಏಜೆಂಟ್ ಖೆಡ್ಡಾಕ್ಕೆ ಬಂದಿದ್ದಾನೆ.
ಇದನ್ನೂ ಓದಿ: ಟೆರರ್ ಗ್ಯಾಂಗ್ಸ್ಟರ್ ಪ್ರಕರಣ: ದೆಹಲಿ, ಹರಿಯಾಣ, ಪಂಜಾಬ್‌ನ 32 ಸ್ಥಳಗಳಲ್ಲಿ ಎನ್‌ಐಎ ದಾಳಿ