ಪಂಜಾಬ್: ಮೊಗಾ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಮುದ್ದೆ ಚರ್ಮ ರೋಗದ (Lumpy skin disease) ಭೀತಿ ಹೆಚ್ಚುತ್ತಿದೆ. ಮಂಗಳವಾರ ಬಧ್ನಿ ಕಲಾಂನ ಗೋಶಾಲೆಯಲ್ಲಿ 75ಕ್ಕೂ ಹೆಚ್ಚು ಹಸುಗಳು ಈ ಮಾರಕ ರೋಗಕ್ಕೆ ಬಲಿಯಾಗಿವೆ. ಮತ್ತೊಂದೆಡೆ, ಪಶು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಜಾನುವಾರು ಸಾಕಣೆದಾರರು ಕಂಗಾಲಾಗಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕಿ ಹರ್ಲೀನ್ ಕೌರ್, ಜಿಲ್ಲೆಯಲ್ಲಿ ಬಹುತೇಕ ಹಸುಗಳಿಗೆ ಈ ಮಾರಣಾಂತಿಕ ರೋಗ ಕಾಣಿಸಿಕೊಂಡಿದೆ. ಜಾನುವಾರಗಳ ರಕ್ಷಣೆಗೆ ಪಂಜಾಬ್ ಸರ್ಕಾರ ಮುಂದಾಗಿದ್ದು, ಔಷಧಿ ವಿತರಿಸಲಾಗುತ್ತಿದೆ. ಇನ್ನೊಂದೆಡೆ, ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಭಟಿಂಡಾ ಜಿಲ್ಲೆಯಲ್ಲಿ 54 ಆಸ್ಪತ್ರೆಗಳಿದ್ದರೆ, 25 ವೈದ್ಯರಿದ್ದಾರೆ. 90 ಪಶು ವೈದ್ಯಕೀಯ ನಿರೀಕ್ಷಕರಲ್ಲಿ ಕೇವಲ 40 ನಿರೀಕ್ಷಕರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಉಳಿದ ಹುದ್ದೆಗಳು ಖಾಲಿ ಇವೆ. ಜೊತೆಗೆ ಹಸಿ ಹಾಲನ್ನು ಬಳಸದೇ, ಕುದಿಸಿ ಕುಡಿಯಬೇಕೆಂದು ಈಗಾಗಲೇ ಜನರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಲಂಪಿ ಚರ್ಮ ರೋಗದ ಲಕ್ಷಣಗಳು.. ಮುದ್ದೆ ಚರ್ಮ ರೋಗವು ಪಶುಗಳಿಗೆ ಕ್ಯಾಪ್ರಿ ಪಾಕ್ಸ್ ಎಂಬ ವೈರಸ್‌ನಿಂದ ಬರುತ್ತದೆ. ಈ ರೋಗ ಎತ್ತು, ಆಕಳು, ಎಮ್ಮೆ ಮತ್ತು ಕರುಗಳಲ್ಲಿ ಮಾತ್ರ ಕಾಣಿಸುತ್ತದೆ. ಈ ವೈರಾಣು ನೊಣ, ಸೊಳ್ಳೆ ಹಾಗೂ ಉಣ್ಣೆ ಕಚ್ಚುವ ಮೂಲಕ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಿಗೆ ಹರಡುತ್ತದೆ. ಮಿಶ್ರ ತಳಿಗಳು ಹಾಗೂ ಹೆಚ್ಚು ಹಾಲು ಕೊಡುವ ಆಕಳು ಮತ್ತು ಕರುಗಳಿಗೆ ಅತಿ ಹೆಚ್ಚಾಗಿ ಈ ರೋಗ ಬಾಧಿಸುತ್ತದೆ.
ರೋಗ ನಿಯಂತ್ರಣ ಕ್ರಮ ಹೇಗೆ..
* ಲಂಪಿ ಚರ್ಮ ರೋಗ ಕಾಣಿಸಿಕೊಂಡಿರುವ ಜಾನುವಾರುಗಳನ್ನು ಉಳಿದ ಆರೋಗ್ಯವಂತಹ ಜಾನುವಾರುಗಳಿಂದ ಬೇರ್ಪಡಿಸಬೇಕು
* ಜಾನುವಾರುಗಳ ಮೈಮೇಲೆ ಚಿಕ್ಕ-ಚಿಕ್ಕ ಗಡ್ಡೆಗಳು ಕಾಣಿಸಿಕೊಂಡಿದ್ದರೆ ದನದ ಕೊಟ್ಟಿಗೆಯಲ್ಲಿ ಕಟ್ಟದೆ ಹೊರಗಡೆ ಕಟ್ಟಬೇಕು
* ನೊಣ, ಸೊಳ್ಳೆ ಹಾಗೂ ಉಣ್ಣೆಗಳನ್ನು ನಿಯಂತ್ರಿಸಬೇಕು, ನೊಣ ಹಾಗೂ ಸೊಳ್ಳೆಗಳು ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ಜಾನುವಾರಗಳಿಗೆ ಅತಿಯಾಗಿ ಕಚ್ಚುತ್ತವೆ. ದಪ್ಪನೆಯ ಸೊಳ್ಳೆ ಪರದೆಯ ಒಳಗಡೆ ಜಾನುವಾರುಗಳನ್ನು ಕಟ್ಟಬೇಕು.
* ಬೇವಿನ ಎಲೆಗಳ ಹೊಗೆಯಿಂದ ಸೊಳ್ಳೆಗಳ ಕಡಿತವನ್ನು ನಿಯಂತ್ರಿಸಬಹುದು.
ಇದನ್ನೂ ಓದಿ: ಜಾನುವಾರುಗಳಿಗೆ ಲಿಂಪಿ ಚರ್ಮ ರೋಗ: ರೈತರಲ್ಲಿ ಹೆಚ್ಚಿದ ಆತಂಕ