ರಾಷ್ಟ್ರ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷವು ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಕೇವಲ ಹತ್ತು ವರ್ಷಗಳಲ್ಲೇ ಉತ್ತರ ಭಾರತದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದೆ.
ಸಾಮಾಜಿಕ ಹೋರಾಟದ ಹಿನ್ನೆಲೆಯ ಅರವಿಂದ್ ಕೇಜ್ರಿವಾಲ್ ನೇತೃತ್ವದ 'ಆಪ್' ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸತತ ಎರಡನೇ ಬಾರಿಗೆ ಆಡಳಿತ ನಡೆಸುತ್ತಿದೆ. ಈಗ ಮತ್ತೊಂದು ಪ್ರಮುಖ ರಾಜ್ಯ ಪಂಜಾಬ್ನಲ್ಲಿಯೂ ಅಮೋಘ ಗೆಲುವು ಸಾಧಿಸಿ ರಾಷ್ಟ್ರೀಯ ಪಕ್ಷಗಳು ನಿದ್ದೆಗೆಡುವಂತೆ ಮಾಡಿದೆ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ 20 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸಿತ್ತು. ಈ ಮೂಲಕ ಈ ಹಿಂದೆ ಆಡಳಿತ ನಡೆಸಿದ್ದ ಶಿರೋಮಣಿ ಅಕಾಲಿ ದಳ (15 ಸ್ಥಾನ) ಮತ್ತು ಬಿಜೆಪಿ (03 ಸ್ಥಾನ)ಯನ್ನು ಹಿಂದಿಕ್ಕಿ ತನ್ನ ವರ್ಚಸ್ಸು ಸ್ಥಾಪಿಸಿತ್ತು. ಈಗ ಐದು ವರ್ಷಗಳಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನೇ ಆಪ್ ದೂಳೀಪಟ ಮಾಡಿಬಿಟ್ಟಿದೆ. 117 ಸಂಖ್ಯಾಬಲದ ವಿಧಾನಸಭೆಯಲ್ಲಿ ಆಪ್ 20ರಿಂದ 92ಕ್ಕೆ ತನ್ನ ಅಧಿಪತ್ಯವನ್ನು ವಿಸ್ತರಿಸಿಕೊಂಡು ಪ್ರಪಂಚ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಕಳೆದ ಬಾರಿ 77 ಸ್ಥಾನಗಳ ಗೆದ್ದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 18 ಸ್ಥಾನಕ್ಕೆ ಕುಸಿದು ಮುಗ್ಗರಿಸಿದೆ. ಇತ್ತ, ಶಿರೋಮಣಿ ಅಕಾಲಿ ದಳ 15ರಿಂದ 3ಕ್ಕೆ ಹಾಗೂ ಕೇಂದ್ರದ ಆಡಳಿತಾರೂಢ ಬಿಜೆಪಿ 3ರಿಂದ 2 ಸ್ಥಾನಕ್ಕೆ ಕುಸಿದಿದೆ.
ಆಪ್ ಗೆಲುವಿಗೆ ಕಾರಣವೇನು?: ‘ಪಂಜಾಬ್ನಲ್ಲಿ ಆಪ್ ಗೆಲುವಿಗೆ ಹಲವು ಪ್ರಮುಖಗಳನ್ನು ಇದೀಗ ಹುಡುಕಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಪಕ್ಕದ ದೆಹಲಿಯಲ್ಲಿ ಆಪ್ ಆಡಳಿತದಲ್ಲಿ ಇರುವುದೇ ಪಂಜಾಬ್ನಲ್ಲಿ ಗೆಲುವಿಗೆ ಕಾರಣವಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಅಲ್ಲದೇ, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳವೇ ಅತ್ಯಧಿಕ ಕಾಲ ಆಡಳಿತ ನಡೆದಿದ್ದು, ಈ ಎರಡೂ ಪಕ್ಷಗಳು ಒಂದೇ ಆಗಿದೆ. ಆದ್ದರಿಂದ ಆಡಳಿತದಲ್ಲಿ ಬದಲಾವಣೆಯನ್ನು ತರಬೇಕೆಂಬ ಧ್ವನಿಯನ್ನು ಆಪ್ ಎತ್ತಿತ್ತು.
ಪಂಜಾಬ್ನಲ್ಲಿ ಬದಲಾವಣೆ ತರಲು ದೆಹಲಿ ಸರ್ಕಾರವನ್ನು ಉದಾಹರಣೆಯಾಗಿ ಆಪ್ ಕೊಡುತ್ತಿತ್ತು. ಆಪ್ನ ಅಧಿನಾಯಕ ಕೇಜ್ರಿವಾಲ್ ನೇತೃತ್ವದ ಸರ್ಕಾರವು ದೆಹಲಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಒತ್ತು ಹಾಗೂ ಜನತೆಗೆ ಆಕರ್ಷಕ ಕೊಡುಗೆಗಳನ್ನು (ವಿದ್ಯುತ್, ನೀರಿನ ದರ ಕಡಿಮೆ) ಕೊಡುವುದೊಂದಿಗೆ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿದೆ. ಮೇಲಾಗಿ ಈ ಹಿಂದೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಯಾವ ರೀತಿಯಾಗಿ 'ಗುಜರಾತ್ ಮಾದರಿ'ಯನ್ನು ಹುಟ್ಟುಹಾಕಿತ್ತೋ ಹಾಗೆ ಆಪ್ 'ದೆಹಲಿ ಮಾದರಿ'ಯನ್ನು ಪ್ರಚಾರಕ್ಕೆ ತಂದಿತ್ತು. ಎಲ್ಲಿಯೇ ಹೋದರೂ ಅಲ್ಲಿ ಕೇಜ್ರಿವಾಲ್ ದೆಹಲಿಯನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ. ಎಲ್ಲೆಡೆ ದೆಹಲಿ ಮಾದರಿ ಸರ್ಕಾರ ಬರಬೇಕೆಂದು ಎಂದು ಆಪ್ ಹೇಳುತ್ತಲೇ ಇತ್ತು.
ಮೇಲಾಗಿ, ಪಂಜಾಬಿ ಜನರು ದೆಹಲಿಯನ್ನು ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಬಹುಪಾಲು ಜನರು ದೆಹಲಿಯಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಇದರ ನಡುವೆ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ಧತಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಒಂದು ವರ್ಷ ಕಾಲ ದೆಹಲಿಯಲ್ಲಿ ಪಂಜಾಬ್ನ ರೈತರು ಆಂದೋಲನ ಕೈಗೊಂಡಿದ್ದರು. ಆಗ ದೆಹಲಿಯ ಸರ್ಕಾರ ರೈತರಿಗೆ ಬೆಂಬಲ ಸೂಚಿಸುವುದೊಂದಿಗೆ ಹೋರಾಟದ ಸ್ಥಳದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪಂಜಾಬಿಗಳು ಮನಗೆಲ್ಲುವ ಕೆಲಸ ಮಾಡಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಫಲಿಸದ ಕಾಂಗ್ರೆಸ್ ತಂತ್ರ: ಪಂಜಾಬ್ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ನಾನಾ ತಂತ್ರಗಳನ್ನು ಮಾಡಿತ್ತು. ಚುನಾವಣೆ ಸಮೀಪಿಸುತ್ತಿದ್ದ ಹೊತ್ತಲ್ಲಿ ಪ್ರಬಲ ನಾಯಕರಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಡೆ ಇಳಿಸಿತ್ತು. ಅಮರೀಂದರ್ ಸಿಂಗ್ ಸ್ಥಾನಕ್ಕೆ ದಲಿತ ಸಮುದಾಯದ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ನೇಮಿಸಿತ್ತು. ಈ ಮೂಲಕ ದಲಿತರು ಸೇರಿಸಿ ಶೋಷಿತರ ಮನಗೆಲ್ಲುವ ಕರಸತ್ತು ಮಾಡಿತ್ತು.
ಆದರೆ, ಸಿಎಂ ಸ್ಥಾನ ಕಳೆದುಕೊಂಡ ಅಮರೀಂದರ್ ಸಿಂಗ್ ಸುಮ್ಮನೆ ಕೂಡಲಿಲ್ಲ. ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರು. ಇದರ ಜತೆಗೆ ಮೊದಲಿನಿಂದಲೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಿದ್ದ ಅಮರಿಂದರ್ ಸಿಂಗ್, ಸಿಧು ವಿರುದ್ಧ ಪಾಕಿಸ್ತಾನದ ಆಸ್ತ್ರವನ್ನು ಬಿಟ್ಟರು. ಸಿಧುಗೆ ಪಾಕಿಸ್ತಾನದೊಂದಿಗೆ ನಂಟಿದೆ ಎಂದೆಲ್ಲ ಬಹಿರಂಗವಾಗಿ ಹೇಳ ತೊಡಗಿದರು. ಹೀಗಾಗಿ ಕಾಂಗ್ರೆಸ್ ದಲಿತ ಸಿಎಂ ಆಸ್ತ್ರವನ್ನು ಮುಂದಿಟ್ಟುಕೊಂಡರೂ ಅದು ಆ ಪಕ್ಷವನ್ನು ಕೈಹಿಡಿದಿಲ್ಲ ಎಂಬುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ಅಮರೀಂದರ್ ಸಿಂಗ್ಗೂ ಮುಖಭಂಗ: ಕಾಂಗ್ರೆಸ್ನಿಂದ ಎರಡು ಮುಖ್ಯಮಂತ್ರಿ ಆಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದರು. ಕಾಂಗ್ರೆಸ್ನಿಂದ ಹೊರ ಬಂದು ಬಿಜೆಪಿಗೆ ಬೆಂಬಲಿಸಿದ್ದರು. ಅಲ್ಲದೇ, ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಆದರೂ, ಅಮರೀಂದರ್ ಸಿಂಗ್-ಬಿಜೆಪಿಯ ಮೈತ್ರಿಯನ್ನೂ ಜನತೆ ತಿರಸ್ಕರಿಸದ್ದಾರೆ. ಸ್ವತಃ ಕ್ಯಾಪ್ಟನ್ ಸಿಂಗ್ ಚುನಾವಣೆಯಲ್ಲಿ ಸೋತು ಭಾರಿ ಮುಖಭಂಗ ಅನುಭವಿಸಿದ್ದಾರೆ.
ಪಕ್ಷ, ಮತ ಗಳಿಕೆ ಎಷ್ಟು?
2017ರ ವಿಧಾನಸಭೆ ಚುನಾವಣೆ
ಪಕ್ಷ | ಸ್ಥಾನ | ಶೇಕಡಾ ಮತ |
ಕಾಂಗ್ರೆಸ್ | 77 | 38.5 |
ಆಪ್ | 20 | 23.7 |
ಅಕಾಲಿ ದಳ | 15 | 25.2 |
ಬಿಜೆಪಿ | 3 | 5.4 |
ಎಲ್ಐಪಿ | 2 | 1.2 |
2022ರ ವಿಧಾನಸಭೆ ಚುನಾವಣೆ
ಪಕ್ಷ | ಸ್ಥಾನ | ಶೇಕಡಾ ಮತ |
ಕಾಂಗ್ರೆಸ್ | 18 | 22.9 |
ಆಪ್ | 92 | 42.0 |
ಅಕಾಲಿ ದಳ | 03 | 18.4 |
ಬಿಜೆಪಿ | 02 | 6.6 |
ಬಿಎಸ್ಪಿ | 01 | 1.7 |