ನವದೆಹಲಿ: ಪಂಜಾಬ್ನಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಜ್ಜಾಗಿರುವ ಆಮ್ ಆದ್ಮಿ ಪಕ್ಷ ಈಗ ರಾಜ್ಯಸಭೆಯ ಐದು ಸ್ಥಾನಗಳು ಬೋನಸ್ ಆಗಿ ಪಡೆಯಲಿದೆ. ಈಗಾಗಲೇ ದೆಹಲಿಯಿಂದ ಮೂರು ಸ್ಥಾನಗಳನ್ನು ಹೊಂದಿರುವ ಆಪ್ ಪಂಜಾಬ್ ಮೂಲಕ ತನ್ನ ಸಂಖ್ಯಾಬಲವನ್ನು ಎಂಟಕ್ಕೆ ಏರಿಸಿಕೊಳ್ಳಲಿದೆ.
ಪಂಜಾಬ್ನ ಐದು ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಗುರುವಾರ ಪ್ರಕಟವಾದ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ 92 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ರಾಜ್ಯಸಭೆಯ ಐದು ಸ್ಥಾನಗಳ ಪೈಕಿ ಮೂರು ಮತ್ತು ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಯಲಿದೆ. ಇದು ಆಪ್ಗೆ ಲಾಭದಾಯವಾಗಿ ಪರಿಣಮಿಸಲಿದೆ.
ಪ್ರಸ್ತುತ ಪಂಜಾಬ್ನಿಂದ ಆಯ್ಕೆಯಾಗಿರುವ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯರಾದ ಪ್ರತಾಪ್ ಸಿಂಗ್ ಬಜ್ವಾ ಮತ್ತು ಸಮ್ಶೇರ ಸಿಂಗ್ ದುಲ್ಲೋ, ಶಿರೋಮಣಿ ಅಕಾಲಿ ದಳದ ಸದಸ್ಯರಾದ ಸುಖ್ದೇವ್ ಸಿಂಗ್ ಧಿಂಡ್ಸಾ ಮತ್ತು ನರೇಶ್ ಗುಜ್ರಾಲ್ ಹಾಗೂ ಬಿಜೆಪಿಯ ಶ್ವೈತ್ ಮಲಿಕ್ ನಿವೃತ್ತಿ ಹೊಂದುತ್ತಿದ್ದಾರೆ.
ಮುಂದಿನ ಜುಲೈನಲ್ಲಿ ಅಕಾಲಿ ದಳದ ಬಲ್ವಿಂದರ್ ಸಿಂಗ್ ಭುಂದರ್ ಮತ್ತು ಕಾಂಗ್ರೆಸ್ನ ಅಂಬಿಕಾ ಸೋನಿ ಕೂಡ ನಿವೃತ್ತಿ ಹೊಂದುತ್ತಿದ್ದು, ಈ ಎರಡೂ ಸ್ಥಾನಗಳನ್ನೂ ಆಪ್ ತನ್ನ ಬುಟ್ಟಿಗೆ ಹಾಕಿಕೊಳ್ಳುವ ನಿರೀಕ್ಷೆ ಇದೆ. ಇತ್ತ, ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಭಗವಂತ್ ಮನ್ ಆಪ್ನ ಏಕೈಕ ಲೋಕಸಭೆ ಸದಸ್ಯರಾಗಿದ್ದು, ಮುಖ್ಯಮಂತ್ರಿ ಹುದ್ದೆಗೇರಿದ ಮೇಲೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.