ನವದೆಹಲಿ : ದೇಶದಲ್ಲಿ ಕೋವಿಡ್ ಲಸಿಕೆಯ ಅಭಾವಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು ಟೀಕಿಸಿ ದೆಹಲಿಯಲ್ಲಿ ಬಿತ್ತಿಪತ್ರಗಳನ್ನು ಅಂಟಿಸಿದ್ದು ನಮ್ಮ ಪಕ್ಷದ ಕಾರ್ಯಕರ್ತರು ಎಂದು ಆಪ್ ಒಪ್ಪಿಕೊಂಡಿದೆ. ಈ ಸಂಬಂಧ ಈಗಾಗಲೇ ಪೊಲೀಸರು 25 ಜನರನ್ನು ಬಂಧಿಸಿದ್ದರು.
ದೆಹಲಿ ಪೊಲೀಸರ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ‘ಲಸಿಕೆಗಳನ್ನು ರಫ್ತು ಮಾಡಿದ ಕ್ರಮವನ್ನು ನಾವು ಸಹ ಪ್ರಶ್ನಿಸುತ್ತೇವೆ.
ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸವಾಲು ಹಾಕಿದ್ದರು. ಬಳಿಕ ತಮ್ಮ ಟ್ವಿಟರ್ ಖಾತೆಯ ಪ್ರೊಪೈಲ್ ಚೇಂಜ್ ಮಾಡಿ ಅಭಿಯಾನವನ್ನೂ ಸಹ ಆರಂಭಿಸಿದರು.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಆಪ್, 'ಕೋವಿಡ್ ಲಸಿಕೆ ರಫ್ತು ಮಾಡಿದ್ದನ್ನು ಪ್ರಶ್ನಿಸಿ ಪ್ರಧಾನಿ ಮೋದಿ ವಿರುದ್ಧ ಪೊಸ್ಟರ್‌ಗಳನ್ನು ಅಂಟಿಸಿದ್ದು ನಮ್ಮ ಪಕ್ಷದ ಕಾರ್ಯಕರ್ತರು. ಈ ಪೋಸ್ಟರ್‌ಗಳ ಹಿಂದೆ ಎಎಪಿ ಇದೆ.
ನನ್ನನ್ನು ಮತ್ತು ನಮ್ಮ ಶಾಸಕರನ್ನು ಬಂಧಿಸಿ. ಆದರೆ, ನಿಮ್ಮ ವಿರುದ್ಧ ಬಿತ್ತಿಪತ್ರಗಳನ್ನು ಅಂಟಿಸಿದ ಕಾರಣಕ್ಕೆ ಬಡವರಿಗೆ ಕಿರುಕುಳ ನೀಡಬೇಡಿ" ಎಂದು ಎಎಪಿ ಮುಖಂಡ ದುರ್ಗೇಶ್ ಪಾಠಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'ಪೊಲೀಸರ ಕ್ರಮಕ್ಕೆ ಎಎಪಿ ಹೆದರುವುದಿಲ್ಲ. ಈ ರೀತಿಯ ಬಿತ್ತಿಪತ್ರಗಳನ್ನು ದೇಶದಾದ್ಯಂತ ಅಂಟಿಸುತ್ತೇವೆ' ಎಂದು ಹೇಳಿದ್ದಾರೆ. ‘ಮೋದಿಜೀ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಗಳಿಗೆ ಏಕೆ ಕಳುಹಿಸಿದ್ದೀರಾ?’ ಎಂದು ಬರೆದಿರುವ ಪೋಸ್ಟರ್‌ಗಳು ಇದೀಗ ದೇಶಾದ್ಯಂತ ಕಾಣುತ್ತಿವೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರು ಸಹ ತಮ್ಮ ಟ್ವಿಟರ್ ಖಾತೆಗಳ ಪ್ರೊಫೈಲ್ ಚೇಂಜ್ ಮಾಡಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.