ಸಾಂಗಲಿ (ಮಹಾರಾಷ್ಟ್ರ): ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುವತಿ ಯಶೋಧರಾ ಮಹೇಂದ್ರ ಸಿಂಗ್ ಶಿಂದೆ ಇವರು ಚುನಾವಣೆಯಲ್ಲಿ ಗೆದ್ದು ಸಾಂಗಲಿ ಜಿಲ್ಲೆಯ ವಡ್ಡಿ ಗ್ರಾಮ ಪಂಚಾಯಿತಿ ಸರಪಂಚ್ ಆಗಿರುವುದು ಇಡೀ ದೇಶದ ಗಮನ ಸೆಳೆದಿದೆ. ಅಲ್ಲದೆ ಶಿಂದೆ ಇವರ ಪೆನೆಲ್ನ ಎಲ್ಲ ಅಭ್ಯರ್ಥಿಗಳು ಜಯಶಾಲಿಗಳಾಗಿರುವುದು ಕೂಡ ವಿಶೇಷವಾಗಿದೆ.
ವಡ್ಡಿ ಇದು ಸಾಂಗಲಿ ಜಿಲ್ಲೆಯಲ್ಲಿ ಮಿರಜ್ ಪಟ್ಟಣಕ್ಕೆ ಹೊಂದಿಕೊಂಡಿರುವ 5 ಸಾವಿರ ಜನಸಂಖ್ಯೆ ಹೊಂದಿರುವ ಸಣ್ಣ ಗ್ರಾಮವಾಗಿದೆ. ಗ್ರಾಮದ ಅಭಿವೃದ್ಧಿಯ ವಿಷಯವನ್ನು ಜನರ ಮುಂದಿಟ್ಟು ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯಶೋಧರಾ ಚುನಾವಣೆಗೆ ಸ್ಪರ್ಧಿಸಿದ್ದರು. ವಿದೇಶದಲ್ಲಿರುವಂತೆ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮತ್ತು ನಾಗರಿಕ ಸೌಲಭ್ಯಗಳನ್ನು ಗ್ರಾಮಕ್ಕೆ ತರುವ ಆಶಯ ಹೊಂದಿದ್ದಾರೆ ಈ ಯುವತಿ.
ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೂ ಒಂದೇ ಶೌಚಾಲಯ ಏಕೆ? ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಏಕೆ ಇಲ್ಲ? ನಮ್ಮ ಹಳ್ಳಿಗಳ ಶಾಲೆಗಳಲ್ಲಿ ವಿದೇಶಗಳಲ್ಲಿರುವಂತೆ ವಿಶೇಷ ಸ್ಥಳಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರಗಳು ಏಕೆ ಇಲ್ಲ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಇವರು ಚುನಾವಣಾ ಪ್ರಚಾರ ನಡೆಸಿದ್ದರು.
ವಿದೇಶದಲ್ಲಿನ ಊರುಗಳಂತೆ ತನ್ನ ಹಳ್ಳಿಯೂ ಆಗಬೇಕೆಂದು ಯಶೋಧರ ಕನಸು ಕಂಡಿದ್ದು, ಅದನ್ನು ಸಾಕಾರಗೊಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲದೆ, ಹಳ್ಳಿಗಳಲ್ಲಿನ ಅಭಿವೃದ್ಧಿ ಇತರ ಹಳ್ಳಿಗಳಿಗೆ ಮಾದರಿಯಾಗಬೇಕೆಂದು ಅವರು ಆಶಯ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಗ್ರಾಪಂ ಚುನಾವಣಾ ಫಲಿತಾಂಶದ ಅಚ್ಚರಿ: ಗಂಡನನ್ನೇ ಹೊತ್ತುಕೊಂಡ ಪತ್ನಿ..!