ನಾಡಿಯಾ (ಪಶ್ಚಿಮ ಬಂಗಾಳ): ಎರಡು ಗರ್ಭಾಶಯವನ್ನು ಹೊಂದಿರುವ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಪ್ರಕರಣ ನಾಡಿಯಾ ಜಿಲ್ಲೆಯ ಶಾಂತಿಪುರ ಸ್ಟೇಟ್ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ. ಸಾಮಾನ್ಯವಾಗಿ ಮಹಿಳೆಯರು ಎರಡು ಗರ್ಭಕೋಶ ಹೊಂದಿರುವುದು ಅಪರೂಪದ ಪ್ರಕರಣವಾಗಿದೆ. ವೈದ್ಯ ಲೋಕಕ್ಕೆ ಸವಾಲು ಕೂಡ ಉಂಟು ಮಾಡುತ್ತದೆ. ಈ ಮಹಿಳೆಗೆ ಸ್ತ್ರೀ ರೋಗ ತಜ್ಞೆ ಡಾ ಪವಿತ್ರ ಬೆಪರಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ತಾಯಿ ಮತ್ತು ಅವಳಿ ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಲು ಅಪರೂಪ ಇಂತಹ ಪ್ರಕರಣ: ಮಹಿಳೆ ಎರಡು ಗರ್ಭಕೋಶವನ್ನು ಹೊಂದಿರುವ ಪ್ರಕರಣಗಳು ವೈದ್ಯಕೀಯ ಲೋಕದಲ್ಲಿ ವಿರಳವಾಗಿದ್ದು, ಇದುವರೆಗೂ ಈ ರೀತಿಯ 17 ಪ್ರಕರಣಗಳು ಜಗತ್ತಿನಲ್ಲಿ ಕಂಡು ಬಂದಿದೆ. ಇದರಲ್ಲಿ ಮೂರು ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ವಿಶೇಷ ಎಂದರೆ, ಎರಡು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲೇ ವರದಿಯಾಗಿದೆ. ಘಟನೆ ಕುರಿತು ಮಾತನಾಡಿದ ವೈದ್ಯರು, ನಾಡಿಯಾದ ನರಸಿಂಗ್‌ಪುರ ಪ್ರದೇಶದ ಅರ್ಪಿತಾ ಮಂಡಲ್ ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಕೆ ಎರಡು ಗರ್ಭಾಶಯ ಹೊಂದಿದ್ದನ್ನು ಗಮನಿಸಿದ ಕೋಲ್ಕತ್ತಾದ ರಾಜರಹತ್ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ, ಆಕೆಗೆ ಕಲ್ಯಾಣಿ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ್ದರು. ಈ ಆಸ್ಪತ್ರೆ ಪ್ರಯಾಣ ದೂರವಿದ್ದ ಹಿನ್ನೆಲೆ ಮಹಿಳೆ ಶಾಂತಿಪುರ ಜನರಲ್ ಆಸ್ಪತ್ರೆಯ ಡಾ.ಪವಿತ್ರಾ ಬೇಪಾರಿ ಅವರ ಬಳಿ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಯಶಸ್ವಿ ಶಸ್ತ್ರ ಚಿಕಿತ್ಸೆ: ಸೋಮವಾರ ಮಧ್ಯಾಹ್ನ ಅರ್ಪಿತಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆಕೆಯನ್ನು ವಿಶೇಷ ವೈದ್ಯಕೀಯ ತಂಡ ಕೂಡ ಪರಿಶೀಲನೆ ನಡೆಸುತ್ತಿತ್ತು. ಎರಡು ಮಕ್ಕಳಿಗೆ ಅರ್ಪಿತಾ ಜನ್ಮ ನೀಡಿದ್ದು, ಅವು ಆರೋಗ್ಯವಾಗಿದ್ದಾವೆ. ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಏಕ ಕಾಲಕ್ಕೆ ಎರಡು ಮಕ್ಕಳ ತಂದೆ ಯಾಗಿರುವ ಹಿನ್ನೆಲೆ ಅರ್ಪಿತಾ ಗಂಡ ಜಿತೇಂದ್ರ ಮಂಡಲ್ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.
ವೈದ್ಯರ ಕಾರ್ಯಕ್ಕೆ ಮೆಚ್ಚುಗೆ: ಈ ಕುರಿತು ಮಾತನಾಡಿರುವ ಜಿತೇಂದ್ರ ಮಂಡಲ್, ವೈದ್ಯೆ ಬೆಪರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ವೈದ್ಯೆ ಬೆಪರಿ, ಅರವಳಿಗೆ ಮತ್ತು ಮಕ್ಕಳ ವಿಭಾಗದ ವೈದ್ಯರ ತಂಡದ ಸಹಕಾರದಿಂದ ಈ ರೀತಿಯ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಲಭ್ಯವಿರುವ ಮೂಲಸೌಕರ್ಯದೊಂದಿಗೆ ಇಂತಹ ಕಷ್ಟಕರ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಅಪಾಯಕಾರಿ. ಈ ಸಂದರ್ಭಗಳಲ್ಲಿ ರಕ್ತ ಬ್ಯಾಂಕ್ ಮತ್ತು ಅರಿವಳಿಕೆ ತಜ್ಞರ ಪಾತ್ರವು ಮುಖ್ಯವಾಗಿದೆ ಎಂದ ಅವರು ಜಿಲ್ಲೆಯಲ್ಲಿ ಮೂಲಸೌಕರ್ಯ ಸ್ವಲ್ಪ ಸುಧಾರಣೆಯ ಅಗತ್ಯವಿದೆ ಎಂದರು.
ಆಸ್ಪತ್ರೆ ಸೂಪರಿಟೆಂಡ್ ಡಾ ತಾರಕ್ ಬುರ್ಮಾನ್ ಡಾ ಬೆಪರಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಮ್ಮಲ್ಲಿರುವ ನಿಯಮಿತ ಸೌಲಭ್ಯಗಳನ್ನು ಬಳಸಿಕೊಂಡು ಅವರು ಅಪಾಯಕಾರಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಉತ್ತಮ ವೈದ್ಯಕೀಯ ಸೇವೆ ನೀಡುವ ಮೂಲಕ ನಮ್ಮ ಆಸ್ಪತ್ರೆಯ ಗೌರವವೂ ಹೆಚ್ಚಿಸಲು ಕಾರ್ಯ ನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸೆಲ್ಫಿ ನಿರಾಕರಿಸಿದ್ದಕ್ಕೆ ಸೋನು ನಿಗಮ್ ಮೇಲೆ ಹಲ್ಲೆ: ದೂರು ನೀಡಿದ ಗಾಯಕ