ಹೈದರಾಬಾದ್ (ತೆಲಂಗಾಣ): ಹುಸೇನ್ ಸಾಗರ್ ನಾಲಾದಲ್ಲಿ ಬಿದ್ದು ಕೊಚ್ಚಿಹೋದ ಮಹಿಳೆಯೊಬ್ಬರ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಂಬರ್‌ಪೇಟೆ ಪೊಲೀಸರು ಬುಧವಾರ ಬೆಳಗ್ಗೆ ಮುಸರಾಂಬಾಗ್ ಸೇತುವೆಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ.
ಇನ್ಸ್ಪೆಕ್ಟರ್ ಅಶೋಕ್ ಹಾಗೂ ಮಹಿಳೆಯ ಕುಟುಂಬಸ್ಥರ ಪ್ರಕಾರ ಮುಶಿರಾಬಾದ್ನ ಕವಾಡಿಗುಡ ವಿಭಾಗದ ದಾಮೋದರ ಸಂಜೀವಯ್ಯನಗರ ಬಸ್ತಿಯಲ್ಲಿ ಜಿ.ಲಕ್ಷ್ಮಿ(55) ಒಂಟಿಯಾಗಿ ವಾಸವಾಗಿದ್ದರು. ಇವರ ಪತಿ ವೆಂಕಟಯ್ಯ ಇತ್ತೀಚೆಗೆ ನಿಧನರಾಗಿದ್ದರು. ಲಕ್ಷ್ಮಿ ಮತ್ತು ವೆಂಕಟಯ್ಯ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಇದೇ 3ರಂದು ಎರಡನೇ ಪುತ್ರಿ ಸುಜಾತಾಳೊಂದಿಗೆ ಲಕ್ಷ್ಮಿ ಮಾತನಾಡಿದ್ದರು. ಬಳಿಕ ಅವರ ಮನೆಯ ಹಿಂದೆ ಹರಿಯುವ ಹುಸೇನ್ಸಾಗರ ಕಾಲುವೆಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ.
ಸ್ವಲ್ಪ ಸಮಯದ ಬಳಿಕ ಸುಜಾತ ತಮ್ಮ ತಾಯಿಯನ್ನು ನೋಡಲು ಬಂದಿದ್ದರು. ಈ ವೇಳೆ ತಾಯಿ ಲಕ್ಷ್ಮಿ ಮನೆಯಲ್ಲಿ ಕಾಣಲಿಲ್ಲ. ಮನೆಯ ಹಿಂಬದಿಯ ಗಾಜು ಒಡೆದಿದ್ದರಿಂದ ಅನುಮಾನಗೊಂಡ ಸುಜಾತ ಗಾಂಧಿನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ಲಕ್ಷ್ಮಿ ಮನೆಯಿಂದ ಹೊರಗೆ ಬಂದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಬಳಿಕ ಹಿಂಬದಿಯ ನಾಲಾದಲ್ಲಿ ಬಿದ್ದಿರಬಹುದು ಎಂದು ಭಾವಿಸಿ ಜಿಎಚ್‌ಎಂಸಿ ಸಿಬ್ಬಂದಿಯೊಂದಿಗೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಲ್ಕು ದಿನಗಳ ನಂತರ ಅವರ ಮೃತದೇಹ ಮೂಸರಾಂಬಾಗ್ ಸೇತುವೆ ಬಳಿಯ ಮೂಸಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಅಂಬರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಆಗಮಿಸಿ ಮೃತದೇಹವನ್ನು ಹೊರತೆಗೆದರು.
ಮರಣೋತ್ತರ ಪರೀಕ್ಷೆಯ ನಂತರ ಲಕ್ಷ್ಮಿ ಅವರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿ ಸಿಂಗಡಿಕುಂಟಾ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಲಕ್ಷ್ಮಿ ಸಾವಿಗೆ ಜಿಎಚ್‌ಎಂಸಿ ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ವಿವಿಧ ಪಕ್ಷಗಳ ಮುಖಂಡರು ಆರೋಪಿಸಿದರು. ಇದರ ಭಾಗವಾಗಿ ಸಿಪಿಎಂ ಮತ್ತು ಟಿಡಿಪಿ ಮುಖಂಡರು ಬುಧವಾರ ಬೆಳಗ್ಗೆ ಮೃತಳ ಮನೆಗೆ ಆಗಮಿಸಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಬಳಿಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ನಾಲಾ ಪ್ರದೇಶದಲ್ಲಿ ರಿಟರ್ನಿಂಗ್ ವಾಲ್ ನಿರ್ಮಿಸದ ಕಾರಣ ಅವಘಡ ಸಂಭವಿಸಿದೆ ಎಂದು ಹೇಳಿದರು. ಲಕ್ಷ್ಮಿ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಎಕ್ಸ್‌ಗ್ರೇಷಿಯಾ ನೀಡಬೇಕು ಹಾಗೂ ಮನೆ ಮಂಜೂರು ಮಾಡಬೇಕು ಎಂದು ಸಿಪಿಎಂ ನಗರ ಕಾರ್ಯದರ್ಶಿ ಎಂ. ಶ್ರೀನಿವಾಸ್ ಆಗ್ರಹಿಸಿದರು. ನಗರದಲ್ಲಿ ಪ್ರತಿ ಬಾರಿ ಮಳೆ ಬಂದಾಗ ಎಲ್ಲೋ ಒಂದು ಕಡೆ ಅಮಾಯಕರು ನದಿಗಳಿಗೆ ಬಿದ್ದು ಕೊಚ್ಚಿ ಹೋಗುತ್ತಿದ್ದಾರೆ ಎಂದು ಟಿಡಿಪಿ ಸಿಕಂದರಾಬಾದ್ ಸಂಸತ್ ಕ್ಷೇತ್ರದ ಅಧ್ಯಕ್ಷ ಪಿ. ಸಾಯಿಬಾಬಾ ಬೇಸರ ವ್ಯಕ್ತಪಡಿಸಿದರು.
ಓದಿ: ಚಾಮರಾಜನಗರದಲ್ಲಿ ಆನೆಗಳ ನಡುವೆ ಕಾದಾಟ: ಗಂಭೀರವಾಗಿ ಗಾಯಗೊಂಡ ಒಂಟಿ ಸಲಗ ಸಾವು