ಹೈದರಾಬಾದ್(ತೆಲಂಗಾಣ): ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಪುರುಷರು ವಂಚನೆಗೊಳಗಾಗಿ ಹಣ ಕಳೆದುಕೊಂಡ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ 15 ಲಕ್ಷ ರೂ. ಪಡೆದು ಮೋಸ ಮಾಡಿದ್ದಾನೆ.
ಹೌದು, ಹೈದರಾಬಾದ್ ಮೂಲದ 30 ವರ್ಷದ ಮಹಿಳೆ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತಾನು ಬ್ರಿಟನ್ನಲ್ಲಿ ನೆಲೆಸಿದ್ದೇನೆ. ಇಲ್ಲಿ ನಾನು ಸಾಕಷ್ಟು ಆಸ್ತಿ ಹೊಂದಿದ್ದೇನೆ. ಭಾರತೀಯ ಹುಡುಗಿಯನ್ನು ಮದುವೆಯಾಗಲು ಬಯಸುತ್ತಿದ್ದೇನೆ. ಇದಕ್ಕೆ ನೀನೇ ಸೂಕ್ತವಾದ ಸಂಗಾತಿ ಎಂದೆಲ್ಲ ಮೋಡಿಯ ಮಾತುಗಳನ್ನಾಡಿದ್ದಾನೆ.
ಅಲ್ಲದೇ, ಒಂದು ದಿನ ಬ್ರಿಟನ್‌ನಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಿಫ್ಟ್ಗಳನ್ನು ಕಳುಹಿಸುತ್ತಿರುವುದಾಗಿ ಆಕೆಗೆ ತಿಳಿಸಿದ್ದಾನೆ. ಅಂತೆಯೇ ಎರಡು ದಿನಗಳ ನಂತರ ಆಕೆಗೆ ಕಸ್ಟಮ್ಸ್ ಅಧಿಕಾರಿಯ ಹೆಸರಲ್ಲಿ ಫೋನ್ ಕರೆ ಬಂದಿದೆ. ಈ ಗಿಫ್ಟ್ಗಳ ಪಡೆಯಲು ಕೊರಿಯರ್ ಶುಲ್ಕವಾಗಿ 15 ಲಕ್ಷ ರೂ. ತುಂಬುವಂತೆ ಸೂಚಿಸಿದ್ದಾನೆ. ಇದನ್ನೇ ನಂಬಿದ ಆಕೆಯ ಬೇರೆ-ಬೇರೆ ಖಾತೆಗಳಿಗೆ ಆಕೆ ಹಣ ವರ್ಗಾವಣೆ ಮಾಡಿದ್ದು, ಒಂದು ವಾರ ಕಳೆದರೂ ಆಕೆಗೆ ಗಿಫ್ಟ್ಗಳು ಬಂದಿಲ್ಲ.
ಹೀಗಾಗಿ ತಾನು ಮೋಸವಾಗಿರುವುದಾಗಿ ತಿಳಿದ ಆಕೆ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಎಸಿಪಿ ಜಿ.ಶ್ರೀಧರ್ ಪ್ರತಿಕ್ರಿಯಿಸಿದ್ದು, ಕೆಲವರು ಅಮೆರಿಕ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡು ಯುವತಿಯರ ಪರಿಚಯ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ವಿದೇಶಿ ದೂರವಾಣಿ ಸಂಖ್ಯೆಗಳನ್ನು ಬಳಸುತ್ತಾರೆ. ಇದರಿಂದ ವಿದೇಶದಿಂದಲೇ ಕರೆ ಬಂದಿದೆ ಎಂಬ ನಂಬಿ ಸುಲಭವಾಗಿ ಮೋಸ ಹೋಗುವ ಪ್ರಸಂಗಗಳು ಇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಂತ್ರಸ್ತ ವಿದ್ಯಾರ್ಥಿನಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಿ: ರ‍್ಯಾಗಿಂಗ್ ಆರೋಪಿಗಳಿಗೆ ಹೈಕೋರ್ಟ್ ಆದೇಶ