ವನಪರ್ತಿ(ತೆಲಂಗಾಣ): ಕಳೆದ 10 ವರ್ಷಗಳ ಹಿಂದೆ ವನಪರ್ತಿಯ ಗಾಂಧಿನಗರದ ನಿವಾಸಿ ಬಾಲಸ್ವಾಮಿ(39) ಜೊತೆ ವಿವಾಹವಾಗಿದ್ದ ಲಾವಣ್ಯ ಪ್ರಿಯಕರನಿಗೋಸ್ಕರ ಗಂಡನ ಕೊಲೆ ಮಾಡಿದ್ದು, ಮೂರು ತಿಂಗಳ ಹಿಂದೆ ನಡೆದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತೆಲಂಗಾಣ ಪೊಲೀಸರು ಆರೋಪಿಗಳ ಬಂಧನ ಮಾಡಿದ್ದಾರೆ.
ಲಾವಣ್ಯ ಹಾಗೂ ಬಾಲಸ್ವಾಮಿಗೆ ಓರ್ವ ಮಗ, ಮಗಳು ಇದ್ದಾರೆ. ಕುಟುಂಬದ ಪೋಷಣೆಗೆ ಗಂಡ ಕೂಲಿ ಕೆಲಸ ಮಾಡ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಬಾಲಸ್ವಾಮಿ ಭೇಟಿಗೋಸ್ಕರ ಮದನಪಲ್ಲಿಯ ಸ್ನೇಹಿತ ನವೀನ್ ವನಪರ್ತಿಗೆ ಮೇಲಿಂದ ಮೇಲೆ ಬರುತ್ತಿದ್ದ. ಈ ವೇಳೆ ಲಾವಣ್ಯಳ ಮೇಲೆ ಆತನ ಕಣ್ಣು ಬಿದ್ದಿದೆ. ಕೆಲ ತಿಂಗಳ ಹಿಂದೆ ಬಾಲಸ್ವಾಮಿ ತನ್ನ ಜಮೀನು ಮಾರಾಟ ಮಾಡಿ ನವೀನ್ನಿಂದ 20 ಲಕ್ಷ ರೂ. ಪಡೆದುಕೊಂಡಿದ್ದಾನೆ. ಹೀಗಾಗಿ, ನವೀನ್ ಬಳಿ ಹೆಚ್ಚಿನ ಹಣವಿರುವ ಬಗ್ಗೆ ಅರಿತುಕೊಂಡಿರುವ ಲಾವಣ್ಯ ಆತನೊಂದಿಗೆ ವಾಸ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ. ಇದರ ಬೆನ್ನಲ್ಲೇ ಗಂಡನ ಕೊಲೆ ಮಾಡುವ ಸಂಚು ರೂಪಿಸಿದ್ದಾಳೆ.
ದೇವಿಗೆ ಕೋಳಿ ಬಲಿ ಕೊಡುವ ನೆಪ: ಜನವರಿ ತಿಂಗಳಲ್ಲಿ ದೇವಸ್ಥಾನಕ್ಕೆ ಗಂಡನನ್ನ ಕರೆದುಕೊಂಡು ಹೋಗುವ ಯೋಜನೆ ರೂಪಿಸಿದ್ದಾಳೆ. ಈ ವಿಚಾರವನ್ನು ನವೀನ್ಗೆ ಮುಂಚಿತವಾಗಿ ತಿಳಿಸಿದ್ದಾಳೆ. ಮೈಸಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ನವೀನ್ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಬಾಲಸ್ವಾಮಿಯನ್ನ ಬಲವಂತವಾಗಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದು, ಪತ್ನಿಯ ಸಮ್ಮುಖದಲ್ಲೇ ಕೊಲೆಗೈದಿದ್ದಾರೆ. ಇದಾದ ಬಳಿಕ ಕೋಟಾದ ಹೊರವಲಯದಲ್ಲಿ ಆತನ ಫೋನ್ ಎಸೆದು ಪರಾರಿಯಾಗಿದ್ದಾರೆ.
ಇದನ್ನೂ ಓದಿ: 300 ವರ್ಷ ಹಳೆಯ ಶಿವ ದೇಗುಲ ನೆಲಸಮ: ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
ಬಳಿಕ ಲಾವಣ್ಯ ಬಳಿ ನವೀನ್ 60 ಸಾವಿರ ರೂಪಾಯಿ ಪಡೆದುಕೊಂಡು, ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಕುರುಮೂರ್ತಿ ಮತ್ತು ಗಣೇಶ್ ಎಂಬುವವರಿಗೆ ನೀಡಿದ್ದಾನೆ. ಬಾಲಸ್ವಾಮಿ ಮೃತದೇಹ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮುಚ್ಚಿ ಹಾಕುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ, ಆತನ ಮೃತದೇಹವನ್ನು ಬಾಲಾಪುರದಲ್ಲಿ ಮುಚ್ಚಿ ಹಾಕಿದ್ದಾರೆ.
ಬಂಧಿಸಿದ ಬಗೆ ಹೇಗೆ? ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 21ರಂದು ಬಾಲಸ್ವಾಮಿ ಸಹೋದರ ವನಪರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಇದರ ಮರುದಿನವೇ ಲಾವಣ್ಯ ತಲೆಮರೆಸಿಕೊಂಡಿದ್ದಾಳೆ. ಇದರಿಂದ ಅನುಮಾನಗೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಕೆಯ ಬಳಿ ಇರುವ ಮೊಬೈಲ್ ಫೋನ್ನಿಂದ ಸಿಗ್ನಲ್ ಟ್ರೇಸ್ ಮಾಡಿ, ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ನವೀನ್, ಕುರುಮೂರ್ತಿ, ಗಣೇಶ್ ಕೃತ್ಯದಲ್ಲಿ ಭಾಗಿಯಾಗಿರುವ ವಿಷಯ ಬಿಚ್ಚಿಟ್ಟಳು.