ಹೈದರಾಬಾದ್ (ತೆಲಂಗಾಣ): 10ನೇ ತರಗತಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ನಾಪತ್ತೆಯಾಗಿರುವ ಘಟನೆ ನಗರದ ಗಚ್ಚಿಬೌಲಿ ಪೊಲೀಸ್ ಠಾಣೆಯ ಚಂದಾನಗರ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರು ಮತ್ತು ಸಂಬಂಧಿಗಳು ಸೇರಿದಂತೆ ಪೊಲೀಸರು ಅವರ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದರು. ಆದ್ರೆ ಎರಡು ದಿನಗಳ ನಂತರ ಅವರಿಬ್ಬರು ಮನೆಗೆ ವಾಪಸಾದಾಗ ಅಸಲಿ ಸಂಗತಿ ಹೊರ ಬಿದ್ದಿದೆ.
ಸ್ಥಳೀಯರು ಹಾಗೂ ಪೊಲೀಸರ ಪ್ರಕಾರ, ಚಂದಾನಗರದಲ್ಲಿ ವಾಸವಾಗಿರುವ ಶಿಕ್ಷಕಿ (26) ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗಚ್ಚಿಬೌಲಿಯ ನಿವಾಸಿಯ 15 ವರ್ಷದ ವಿದ್ಯಾರ್ಥಿ ಅದೇ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾನೆ. ಕಳೆದ ತಿಂಗಳು ಈ ಇಬ್ಬರು ಮನೆಯಿಂದ ದಿಢೀರನೇ ನಾಪತ್ತೆಯಾಗಿದ್ದರು.
ಎರಡು ಕುಟುಂಬದ ಪೋಷಕರು ತಮ್ಮವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಎಲ್ಲಿ ಹುಡುಕಿದ್ರೂ ಇವರ ಸುಳಿವು ಸಿಕ್ಕಿರಲಿಲ್ಲ. ಬಳಿಕ ಎರಡು ಕುಟುಂಬಗಳು ಗಚ್ಚಿಬೌಲಿಯ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ಸಲ್ಲಿಸಿದ್ರು. ದೂರು ಸ್ವೀಕರಿಸಿದ ಪೊಲೀಸರು ಸಹ ಇವರಿಬ್ಬರ ಪತ್ತೆಗೆ ಶೋಧ ಕೈಗೊಂಡಿದ್ದರು. ದೂರು ನೀಡಿ ಎರಡು ದಿನಗಳ ಕಳೆದ್ರೂ ಸಹ ಪೊಲೀಸರಿಗೆ ಇವರ ಸುಳಿವು ಸಿಗಲಿಲ್ಲ. ಬಳಿಕ ಶಿಕ್ಷಕಿಯ ತಾತ ಪೊಲೀಸ್ ಠಾಣೆಗೆ ಬಂದು ನಮ್ಮ ಮೊಮ್ಮಗಳು ವಾಪಸ್ ಮನೆಗೆ ಬಂದಿದ್ದಾಳೆ. ನಾವು ದೂರು ಹಿಂಪಡೆಯುತ್ತೇವೆ ಎಂದು ಹೇಳಿದರು. ಇದಾದ ಬಳಿಕ ವಿದ್ಯಾರ್ಥಿ ಪೋಷಕರು ಸಹ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಮ್ಮ ಮನೆಗೆ ವಾಪಸಾಗಿದ್ದಾನೆ. ದೂರು ಹಿಂಪಡೆಯುತ್ತಿದ್ದೇವೆ ಎಂದು ಹೇಳಿ ತಾವೂ ನೀಡಿರುವ ದೂರುಗಳನ್ನು ವಾಪಸ್ ಪಡೆದರು.
ಶಿಕ್ಷಕಿಯನ್ನು ಠಾಣೆಗೆ ಕರೆಯಿಸಿ ಕೌನ್ಸೆಲಿಂಗ್.. ದೂರು ವಾಪಾಸ್ ಪಡೆಯುವ ವೇಳೆ ವಿದ್ಯಾರ್ಥಿಯ ಪೋಷಕರಿಗೆ ಪೊಲೀಸರು ನಿಮ್ಮ ಮಗ ಎಲ್ಲಿಗೆ ಹೋಗಿದ್ದನು ಎಂದು ಪ್ರಶ್ನಿಸಿದ್ದಾರೆ. ಆಗ ಫೆ.16ರಂದು ಶಿಕ್ಷಕರ ಜತೆ ಹೋಗಿರುವ ಬಗ್ಗೆ ವಿದ್ಯಾರ್ಥಿ ಪೋಷಕರು ಪೊಲೀಸರಿಗೆ ತಿಳಿಸಿದರು. ಈ ಕ್ರಮದಲ್ಲಿ ಶಿಕ್ಷಕಿಯನ್ನು ಪೊಲೀಸ್ ಠಾಣೆಗೆ ಕರೆಸಿ ಕೌನ್ಸೆಲಿಂಗ್ ನಡೆಸಲಾಗಿತ್ತು. ಈ ವೇಳೆ ಅವರ ನಡುವೆ ಪ್ರೇಮ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಹೌದು, ಶಿಕ್ಷಕಿ ಮತ್ತು ವಿದ್ಯಾರ್ಥಿ ಮಧ್ಯೆ ಪ್ರೇಮ ಉಂಟಾಗಿದೆ. ಅಷ್ಟೇ ಅಲ್ಲ, ಶಿಕ್ಷಕಿ ಮನೆಯಲ್ಲಿ ಹಿರಿಯರು ಆಕೆಯ ಮದುವೆಗಾಗಿ ಗಂಡು ಹುಡುಕಾಟ ನಡೆಸಿದ್ದರು. ಇದರಿಂದ ಹೆದರಿದ ಶಿಕ್ಷಕಿ ತಾನೂ ಪ್ರೀತಿಸುತ್ತಿದ್ದ ವಿದ್ಯಾರ್ಥಿಯ ಜೊತೆ ಹೋಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈಗ ಪೊಲೀಸರು ವಿದ್ಯಾರ್ಥಿ ಮತ್ತು ಶಿಕ್ಷಕಿಗೆ ಕೌನ್ಸಿಲ್ ಕೊಟ್ಟು ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.
ಇಂತಹ ಪ್ರಕರಣಗಳು ಇದೇ ಮೊದಲಲ್ಲ. ಇಂತಹ ಕೆಲ ಘಟನೆಗಳು ಈ ಹಿಂದೆ ನಡೆದಿವೆ. ಆದ್ರೆ ಇಂತಹ ಪ್ರಕರಣಗಳು ನಡೆಯದಂತೆ ಶಾಲಾ ಆಡಳಿತ ಮಂಡಳಿ ಮತ್ತು ಆಯಾ ಕುಟುಂಬದ ಸದಸ್ಯರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂಬುದು ಪೊಲೀಸರ ಮಾತಾಗಿದೆ.
ಓದಿ: 'ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ': ಪತ್ನಿ ಬಗ್ಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಮಾತು